ಬಳ್ಳಾರಿ: ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೀಕರ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಬೆಳೆನಷ್ಟ ಸೇರಿದಂತೆ ಜನಜೀವನಕ್ಕೂ ಭಾರೀ ಹಿನ್ನಡೆ ಆಗಿದೆ. ಹೀಗಾಗಿ ಈ ಭಾಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಆಗ್ರಹಿಸಿ ನಾನಾ ಕನ್ನಡಪರ ಸಂಘಟನೆಗಳ ಮುಖಂಡರು ಪ್ರತಿಭಟನೆ ನಡೆಸಿದರು.
ಕನ್ನಡಪರ ಸಂಘಟನೆಗಳ ಹಿರಿಯ ಮುಖಂಡ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ಹತ್ತಾರು ಮುಖಂಡರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿಂದು ಜಮಾಯಿಸಿ ಕೆಲಕಾಲ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಬಳಿಕ ಮಾತನಾಡಿದ ವಾಟಾಳ್ ನಾಗರಾಜ ಅವರು, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಭೀಕರ ಪ್ರವಾಹ ಎದುರಾಗಿದೆ. ಅದರ ವೈಮಾನಿಕ ಸಮೀಕ್ಷೆಗೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಆಗಸದಲ್ಲಿ ತೇಲಾಡಿ ಸಮೀಕ್ಷೆ ನಡೆಸಿದ್ದಾರೆ. ಇದೊಂದು ನಾಟಕವನ್ನು ಸಿಎಂ ಬಿಎಸ್ವೈ ಅವರು ಕಳಿತುಬಿಟ್ಟಿದ್ದಾರೆ. ಕೂಡಲೇ ಪ್ರಧಾನಿ ನರೇಂದ್ರ ಮೋದಿಯವರನ್ನು ಈ ಭಾಗದ ವೈಮಾನಿಕ ಸಮೀಕ್ಷೆ ನಡೆಸಲು ಕರೆತರಬೇಕು. ಹಾಗೂ ಈವರೆಗೂ ಭೀಕರ ಪ್ರವಾಹದ ಪರಿಹಾರವೆಷ್ಟು ಎಂಬುದರ ಕುರಿತು ಶ್ವೇತ ಪತ್ರ ಹೊರಡಿಸಬೇಕೆಂದು ಆಗ್ರಹಿಸಿದರು.
ಆಡಳಿತ ಪಕ್ಷದ ಸಚಿವರು, ಶಾಸಕರು ಯಾರೊಬ್ಬರಿಗೂ ಸಿಎಂ ಬಿಎಸ್ವೈ ಎದುರು ನಿಂತು ಮಾತಾಡೋಕೆ ಧೈರ್ಯವೇ ಇಲ್ಲ. ಇನ್ನೂ ವಿರೋಧ ಪಕ್ಷವಂತೂ ಇಲ್ಲಿ ಇಲ್ಲದಂತಾಗಿದೆ. ಏಕೆಂದರೆ ಅವರೆಲ್ಲರಿಗೂ ಕೋವಿಡ್ ಸೋಂಕು ತಗುಲಿ ಆಸ್ಪತ್ರೆಗಳ ಪಾಲಾಗಿದ್ದಾರೆ. ನಾನು ಮಾತ್ರ ಬಿಎಸ್ವೈ ಎದುರು ನಿಂತು ಮಾತಾಡಬಲ್ಲವನಾಗಿದ್ದೇನೆ. ಆದರೆ, ನಿರಂತರವಾಗಿ ನನ್ನನ್ನ ಮೊದಲಿನಿಂದಲೂ ಕೂಡ ಚುನಾವಣೆಯಲ್ಲಿ ಸೋಲಿಸುತ್ತಾ ಬಂದಿದ್ದಾನೆ ಈ ಯಡಿಯೂರಪ್ಪ ಎಂದರು.
50 ಸಾವಿರ ಕೋಟಿ ರೂ.ಗಳ ಪ್ಯಾಕೇಜ್ ಘೋಷಣೆಗೆ ಆಗ್ರಹ: ಈ ಭಾಗದಲ್ಲಾದ ಪ್ರವಾಹದ ನಷ್ಟದ ಕುರಿತು ಖುದ್ದು ವೈಮಾನಿಕ ಸಮೀಕ್ಷೆ ನಡೆಸಲು ಮೋದಿಯವರನ್ನು ಕರೆತರಬೇಕು. ಅಂದಾಜು 50 ಸಾವಿರ ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ವಾಟಾಳ್ ನಾಗರಾಜ ಆಗ್ರಹಿಸಿದ್ದಾರೆ.