ಬಳ್ಳಾರಿ: ಜಿಲ್ಲೆಯ ಕಂಪ್ಲಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ ಭರ್ಜರಿ ಮತಯಾಚನೆ ಮಾಡಿದರು.
ಕಂಪ್ಲಿಯ ವಿವಿಧ ಗ್ರಾಮಗಳಿಗೆ ತೆರೆದ ವಾಹನದಲ್ಲಿ ತೆರಳಿದ ಉಗ್ರಪ್ಪನವರು ಮತಯಾಚಿಸಿದ ಬಳಿಕ ಮಾತನಾಡಿ, ಗಣಿ ಜಿಲ್ಲೆ ಬಳ್ಳಾರಿಗೆ ಜಿಂದಾಲ್ ಉಕ್ಕು ಕಾರ್ಖಾನೆ ಹಾಗೂ ಬಳ್ಳಾರಿ ಥರ್ಮಲ್ ಪವರ್ ಪ್ಲಾಂಟ್ (ಬಿಟಿಪಿಎಸ್) ಅನ್ನು ಕೊಡುಗೆಯಾಗಿ ಕೊಟ್ಟಿದ್ದು ಕಾಂಗ್ರೆಸ್ ಎಂದರು.
ಕಳೆದ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನನಗೆ ಅತ್ಯಧಿಕ ಮತ ನೀಡಿ ತಾವೆಲ್ಲ ಗೆಲ್ಲಿಸಿದ್ದೀರಿ. ಐದು ತಿಂಗಳ ಅವಧಿಗೆ ನಾನು ಬಳ್ಳಾರಿಯ ಧ್ವನಿಯಾಗಿ ಪ್ರಾಮಾಣಿಕವಾಗಿ ಶ್ರಮಿಸಿರುವೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತು ಪಾರ್ಲಿಮೆಂಟ್ನಲ್ಲಿ ಸಮಯ ಸಿಕ್ಕಾಗಲೆಲ್ಲಾ ಧ್ವನಿ ಎತ್ತಿರುವೆ. ಅಗತ್ಯ ಅನುದಾನವನ್ನು ಈ ಜಿಲ್ಲೆಗೆ ತರಲು ಸಾಕಷ್ಟು ಶ್ರಮಿಸಿರುವೆ ಎಂದು ತಿಳಿಸಿದರು.
ಅಲ್ಲದೇ, ಈ ಭಾಗದ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಸಲುವಾಗಿ ಸಂವಿಧಾನದ 371(ಜೆ) ಕಲಂ ಅನ್ನು ಜಾರಿಗೊಳಿಸಿದ್ದು ಕಾಂಗ್ರೆಸ್ ಪಕ್ಷ. ಹಾಗಾಗಿ, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದ್ರೇ, ಬಡ ಹಾಗೂ ಕೂಲಿ ಕಾರ್ಮಿಕರ ಧ್ವನಿಯಾಗಿರುವೆ. ಈ ಬಾರಿಯ ಲೋಕಸಭಾ ಚುನಾವಣೆಯಲಿ ಮತ್ತೊಮ್ಮೆ ನನಗೆ ತಾವೆಲ್ಲರೂ ಆಶೀರ್ವದಿಸಬೇಕು ಎಂದು ವಿ.ಎಸ್ ಉಗ್ರಪ್ಪ ಮನವಿ ಮಾಡಿಕೊಂಡರು.