ಬಳ್ಳಾರಿ: ನಗರದ ಹೊಟೇಲ್ ಮತ್ತು ಅಂಗಡಿಗಳಲ್ಲಿ ಮಂಗಳಮುಖಿಯರ ಕಾಟ ಹೆಚ್ಚಾಗಿದೆ ಎಂಬ ದೂರು ಕೇಳಿಬಂದ ಹಿನ್ನೆಲೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ದುಡ್ಡಿಗಾಗಿ ದೌರ್ಜನ್ಯವೆಸಗುವುದು ಮತ್ತು ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಜನರು ನೀಡಿರುವ ದೂರಿನನ್ವಯ ಇಲ್ಲಿನ ಬ್ರೂಸ್‌ಪೇಟೆ ಠಾಣೆ ಪೊಲೀಸರು ಮಂಗಳಮುಖಿಯರನ್ನ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದಾರೆ.
ಮಂಗಳಮುಖಿಯರು ಅಂಗಡಿಗಳಿಗೆ ಬಂದಾಗ ಅವರು ಕೇಳಿದಷ್ಟು ಹಣ ನೀಡಬೇಕು, ಇಲ್ಲದಿದ್ದರೆ ಕೌಂಟರ್ ಬಳಿ ಹೋಗಿ ದಾಂಧಲೆ ಮಾಡುತ್ತಾರೆ. ಅವಾಚ್ಯ ಪದಗಳಿಂದ ನಿಂದಿಸುವುದಲ್ಲದೇ ಕೈಮಾಡಲು ಮುಂದಾಗುತ್ತಾರೆ. ಮಂಗಳವಾರ ಮತ್ತು ಶುಕ್ರವಾರ ಮಂಗಳಮುಖಿಯರ ಕಾಟದಿಂದ ವ್ಯಾಪಾರ ಮಾಡುವುದೇ ಕಷ್ಟವಾಗಿದೆ ಎಂದು ವ್ಯಾಪಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಸಾರ್ವಜನಿಕರು ಸಹ ಮಂಗಳಮುಖಿಯರ ಕಾಟಕ್ಕೆ ಬೇಸತ್ತು ಕ್ರಮಕೈಗೊಳ್ಳದ ಪೊಲೀಸರ ವಿರುದ್ಧ ಅಸಮಾಧಾನ ಹೊರಹಾಕಿದ್ದರು.
ಈ ಹಿನ್ನೆಲೆಯಲ್ಲಿ ಬ್ರೂಸ್‌ಪೇಟೆ ಠಾಣೆಯ ಸಿಪಿಐ ಕಾಳೀಕೃಷ್ಣ ಸುಮಾರು 35 ರಿಂದ 40 ಮಂಗಳಮುಖಿಯರನ್ನು ಠಾಣೆಗೆ ಕರೆಯಿಸಿ ವ್ಯಾಪಾರಿಗಳಿಗೆ ತೊಂದರೆ ಕೊಡದಂತೆ ಎಚ್ಚರಿಕೆ ಕೊಟ್ಟಿದ್ದಾರೆ. ಅಂಗಡಿಗಳತ್ತ ತೆರಳದೇ ಕಷ್ಟಪಟ್ಟು ದುಡಿದು ಬದುಕು ಸಾಗಿಸಿ ಎಂದು ತಾಕೀತು ಮಾಡಿದ್ದಾರೆ.