ಬಳ್ಳಾರಿ: ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೇಮಕಾತಿಯಲ್ಲಿ ಭ್ರಷ್ಟಾಚಾರ, ಅಕ್ರಮ ನಡೆಯುತ್ತಿದೆ. ಇದನ್ನು ತಡೆಗಟ್ಟಲು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಅನ್ಯಾಯಕ್ಕೊಳಗಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಎಂದು ಎಬಿವಿಪಿ ಕಾರ್ಯಕರ್ತ ಅಡವಿಸ್ವಾಮಿ ತಿಳಿಸಿದರು.
ನಗರದ ಖಾಸಗಿ ಹೊಟೇಲ್ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಂಡಿಕೇಟ್ ಸದಸ್ಯ ಕೆ.ಹೆಚ್.ಹರಿಕುಮಾರ್ ವಿವಿಯಲ್ಲಿ ಬೋಧಕ ಮತ್ತು ಬೋಧಕೇತರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಇಡೀ ರಾಜ್ಯವೇ ಮಾತನಾಡುತ್ತಿದ್ದರೂ, ಯಾವ ಜನಪ್ರತಿನಿಧಿಯೂ ತಲೆಕೆಡಸಿಕೊಂಡಂತೆ ಕಾಣುತ್ತಿಲ್ಲ. ಆದ್ದರಿಂದ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿರುವ ಅಧ್ಯಾಪಕರು, ಬೋಧಕೇತರ ಸಿಬ್ಬಂದಿ,ವಿದ್ಯಾರ್ಥಿಗಳು, ಸಂಘಟನೆಗಳು ವ್ಯವಸ್ಥೆ ಬಗ್ಗೆ ನಂಬಿಕೆ ಕಳೆದುಕೊಳ್ಳುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಮೇ ತಿಂಗಳಲ್ಲಿ Non 371 ಜೆ ಎಂದು ಗೊಂದಲ:
ಐದು ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಇದು ಯಾವುದೇ ಹಳೆಯ ಮರು ಅಧಿಸೂಚನೆಯಾಗಿರುವುದಿಲ್ಲ. ಹೊಸ ಅಧಿಸೂಚನೆಯಾಗಿರುತ್ತದೆ. 371ಜೆ ಯೇತರ ಹುದ್ದೆಗಳೆಂದು ಅಧಿಸೂಚನೆಯಲ್ಲಿ ನಮೂದಿಸಿ, 371ಜೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಗೊಂದಲ ಉಂಟಾಗುವಂತೆ ಉದ್ದೇಶ ಪೂರ್ವಕವಾಗಿ ಮಾಡಿದ್ದಾರೆ ಎಂದು ದೂರಿದ್ದಾರೆ.
ಏಕಪಕ್ಷೀಯ ನಿರ್ಧಾರ :
25 ಮೇ 2019 ರಂದು ವಿವಿಯ ಸಿಂಡಿಕೇಟ್ ಸದಸ್ಯರಾದ ಡಾ.ಕೆ.ಆರ್ ವೇಣುಗೋಪಾಲರೆಡ್ಡಿ ಗೈರು ಹಾಜರಾದ ಕಾರಣ , ತಕ್ಷಣ ಏಕಪಕ್ಷೀಯವಾಗಿ ವಿವಿಯ ಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಡಾ. ಶಾಂತನಾಯ್ಕ್ ಅವರನ್ನು ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆ ಮಾಡಿ, ಅದೇ ಆದೇಶ ಪತ್ರ ನೀಡಿ ದಿಢೀರ್ ಸಿಂಡಿಕೇಟ್ ಸಭೆಯಲ್ಲಿ ನೇಮಕಾತಿಗೆ ಅನುಮತಿ ಪಡೆದುಕೊಂಡಿದ್ದಾರೆ.
ರಾಜ್ಯಪಾಲರಿಗೆ ಎಬಿವಿಪಿ ಮೊರೆ :
ವಿವಿಯ ನೇಮಕಾತಿಯಲ್ಲಿ ಭ್ರಷ್ಟಾಚಾರ, ಅಕ್ರಮ ನಡೆಯುತ್ತಿದೆ ಅದನ್ನು ತಡೆಗಟ್ಟಲು ವಿವಿಯ ಮಾಜಿ ಸಿಂಡಿಕೇಟ್ ಸದಸ್ಯರು ಹಾಗೂ ಅನ್ಯಾಯಕ್ಕೆ ಒಳಗಾದ ಬೋಧಕ ಮತ್ತು ಬೋಧಕೇತರ ಅಭ್ಯರ್ಥಿ ಕರ್ನಾಟಕ ರಾಜ್ಯದ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸುತ್ತೇವೆ ಹಾಗೂ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಬೇಕೆಂದು ಮನವಿ ಮಾಡುತ್ತೇವೆ ಎಂದಿದ್ದಾರೆ.