ಬಳ್ಳಾರಿ: ಅನರ್ಹ ಶಾಸಕರಿಗೆ ಎದುರಾದಂತಹ ಪರಿಸ್ಥಿತಿ ನನ್ನ ಶತ್ರುಗಳಿಗೂ ಬರಬಾರದು ಎಂದು ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಬಳ್ಳಾರಿಯ ಡಿಸಿ ಕಚೇರಿಯ ಆವರಣದಲ್ಲಿ ಇಂದು ನಡೆದ ಮೂರು ದಿನಗಳ ಕಾಲ ಹಂಪಿ ಉತ್ಸವ ಆಚರಣೆಗೆ ಆಗ್ರಹಿಸಿ ಕೈಗೊಂಡಿದ್ದ ಹೋರಾಟದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ನಂಬಿದ ಮತದಾರರಿಗೆ ದ್ರೋಹ ಮಾಡುತ್ತಾರೋ ಅವರಿಗೆ ಇಂತಹ ಕಷ್ಟ ಬಂದೇ ಬರುತ್ತೆ. ಅನರ್ಹ ಶಾಸಕರಿಗೂ, ಬಿಜೆಪಿಗೂ ಸಂಬಂಧವಿಲ್ಲ ಎಂಬ ಡಿಸಿಎಂ ಲಕ್ಷ್ಮಣ ಸವದಿ ಹೇಳಿಕೆಗೆ ಕೆಪಿಸಿಸಿ ವಕ್ತಾರ ಉಗ್ರಪ್ಪನವರು ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ.
ರಾಜ್ಯ ಬಿಜೆಪಿ ಹಾಗೂ ರಾಜ್ಯ ಸರ್ಕಾರದಲ್ಲಿ ಎರಡು ಗುಂಪುಗಳಿವೆ. ಯಡಿಯೂರಪ್ಪ ಹೇಳಿದ್ದನ್ನ ಸಂತೋಷ ಜೀಯವ್ರು ಒಪ್ಪುವುದಿಲ್ಲ. ಸಂತೋಷ ಜೀ, ಯಡಿಯೂರಪ್ಪನವರು ಹೇಳೋದನ್ನ ಈಶ್ವರಪ್ಪ ಸದಾನಂದಗೌಡ ಒಪ್ಪಲ್ಲ. ಮೂರು ಮಂದಿಯನ್ನ ಉಪ ಮುಖ್ಯಮಂತ್ರಿಗಳನ್ನಾಗಿ ಮಾಡಿದ್ದಾರೆ. ಆ ಮೂರು ಡಿಸಿಎಂಗಳು ಸಿಎಂ ಬಿಎಸ್ವೈ ಹೇಳೋದನ್ನ ಒಪ್ಪಿಕೊಳ್ಳಲ್ಲ ಎಂದರು.
ಯಡಿಯೂರಪ್ಪ, ಈಶ್ವರಪ್ಪ ಹಲವು ಬಾರಿ ಈ ಸರ್ಕಾರ ಬಂದಿರೋದೇ ಈ ಅನರ್ಹ ಶಾಸಕರಿಂದ ಎಂದಿದ್ದಾರೆ. ಅವರಿಗೆ ಮಂತ್ರಿ ಸ್ಥಾನಗಳನ್ನ ಮೀಸಲಿಟ್ಟಿದ್ದೇವೆ. ಈ ಸರ್ಕಾರ ಬರಲಿಕ್ಕೆ ಬಿಜೆಪಿ ಸಾವಿರ ಕೋಟಿ ಹಣ ವೆಚ್ಚ ಮಾಡಿ ಅವರ ರಾಜೀನಾಮೆಯನ್ನು ಪಡೆದಿದೆ. ಪಕ್ಷ ದ್ರೋಹ ಹಾಗೂ ಜನರಿಗೆ ದ್ರೋಹ ಬಗೆದವರಿಗೆ ಮುಂದಿನ ದಿನಗಳಲ್ಲಿ ಜನ ತಕ್ಕಪಾಠ ಕಲಿಸುತ್ತಾರೆ. ಅನರ್ಹ ಶಾಸಕರನ್ನ ಯಾವುದೇ ಕಾರಣಕ್ಕೂ ಪಕ್ಷಕ್ಕೆ ವಾಪಸ್ ಕರೆಸಿಕೊಳ್ಳಲ್ಲ. ಪಕ್ಷದ ಅಧ್ಯಕ್ಷರು ಹಾಗೂ ಸಿಎಲ್ಪಿ ನಾಯಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಹೇಳಿದ್ದಾರೆ.