ಬಳ್ಳಾರಿ: ಕೋವಿಡ್ ಹರಡುತ್ತಿರುವ ಹಿನ್ನೆಲೆ ಏ.12ರಿಂದ 15ರವರೆಗೆ ನಡೆಯಲಿದ್ದ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿದುರ್ಗ ಗ್ರಾಮದ ಉತ್ಸವಾಂಭ ದೇವಸ್ಥಾನದ ವಾರ್ಷಿಕ ಯುಗಾದಿ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ ಎಂದು ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಹೆಚ್.ಪ್ರಕಾಶ್‍ರಾವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೊರೊನಾ ವೈರಾಣು ತಡೆಗಟ್ಟಲು ಯುಗಾದಿ, ಷಬ್-ಎ-ಬರಾತ್, ಗುಡ್ ಫ್ರೈ ಡೇ, ಜಾತ್ರಾ ಉತ್ಸವಗಳು, ಸಾರ್ವಜನಿಕರು ಗುಂಪು ಸೇರಬಹುದಾದ ಚಟುವಟಿಕೆಗಳನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಯವರು ಆದೇಶ ಹೊರಡಿಸಿರುವ ಹಿನ್ನೆಲೆ ಉಚ್ಚಂಗಿದುರ್ಗ ಜಾತ್ರಾ ಮಹೋತ್ಸವ ನಿಷೇಧಿಸಲಾಗಿದೆ.
ದೇವಸ್ಥಾನದ ಗುಡ್ಡದ ಮೇಲೆ, ಪಾದಗಟ್ಟೆಯ ಹತ್ತಿರ, ಶ್ರೀ ಹಾಲಮ್ಮ ತೋಪಿನಲ್ಲಿ ಸಾರ್ವಜನಿಕರಿಗೆ ದೇವಿಯ ದರ್ಶನ ಮತ್ತು ಪ್ರವೇಶ ನಿಷೇಧಿಸಲಾಗಿದೆ. ಏ.12ರಿಂದ ಏ.14ರವರೆಗೆ ಉಚ್ಚಂಗಿದುರ್ಗ ಗ್ರಾಮಕ್ಕೆ ಯಾರೂ ಬೇರೆ ಗ್ರಾಮದವರು ಬರಬಾರದು ಎಂದು ಅವರು ವಿಜ್ಞಾಪಿಸಿದ್ದಾರೆ.