ಬಳ್ಳಾರಿ: ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಪಟ್ಟಣ ಹೊರವಲಯದ ರಾಷ್ಟ್ರೀಯ ಹೆದ್ದಾರಿ- 50ರ ಬೈಪಾಸ್ ಬಳಿ ಕಾರೊಂದು ಪಾದಚಾರಿ ಮೇಲೆ ಹರಿದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ. ಅಪಘಾತಕ್ಕೀಡಾದ ಕಾರಿನಲ್ಲಿ ಪ್ರಭಾವಿ ಸಚಿವರ ಪುತ್ರ ಇದ್ದರು ಎಂಬ ಆರೋಪ ಕೇಳಿ ಬಂದಿದೆ.
ಮರಿಯಮ್ಮನಹಳ್ಳಿ ತಾಂಡಾ ಮೂಲದ ರವಿನಾಯ್ಕ (19), ಕಾರಿನಲ್ಲಿದ್ದ ಬೆಂಗಳೂರಿನ ಸಚಿನ್ (27) ಎಂಬುವರು ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಚಾಲಕ ರಾಹುಲ್ ಸೇರಿದಂತೆ ರಾಕೇಶ್, ಶಿವಕುಮಾರ್ ಗಾಯಗೊಂಡಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಈ ಕುರಿತು ಮರಿಯಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಘಟನೆಯ ಹಿನ್ನೆಲೆ:
ಫೆ.10ರಂದು ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೊರವಲಯದ ರಾಷ್ಟ್ರೀಯ ಹೆದ್ದಾರಿ-50ರ ಬೈಪಾಸ್ ಬಳಿ ಕಾರೊಂದು ಡಾಬಾದ ಬಳಿಯಿದ್ದ ಪಾದಚಾರಿ ಮೇಲೆ ಹರಿದಿತ್ತು. ಪರಿಣಾಮ ಆ ವ್ಯಕ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದು, ಕಾರಿನಲ್ಲಿದ್ದ ವ್ಯಕ್ತಿ ಸಹ ಕೊನೆಯುಸಿರೆಳೆದಿದ್ದ.
ಅಪಘಾತ ನಡೆಸಿದ ಕಾರಿನಲ್ಲಿ ಸಚಿವರ ಪುತ್ರ ಇದ್ದ ಎನ್ನಲಾಗುತ್ತಿದ್ದು, ಆತನಿಗೂ ಗಾಯಗಳಾಗಿದ್ದು, ಹೆಚ್ಚುವರಿ ಚಿಕಿತ್ಸೆಗೆಂದು ಹೈದರಾಬಾದ್ನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಹೇಳಲಾಗುತ್ತಿದೆ. ಕಾರಿನಲ್ಲಿ ಐವರು ಪ್ರಯಾಣ ಬೆಳೆಸುತ್ತಿರುವ ಮಾಹಿತಿ ಇದ್ದರೂ ಪೊಲೀಸರು ಕೇವಲ ನಾಲ್ವರು ಮಾತ್ರ ಪ್ರಯಾಣ ಬೆಳೆಸುತ್ತಿದ್ದರು ಎನ್ನುವ ಮೂಲಕ ಪ್ರಕರಣದ ದಿಕ್ಕನ್ನೇ ಬದಲಾಯಿಸುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿವೆ.