ವಿಜಯನಗರ: ಥಾಯ್ಲೆಂಡ್ ದೇಶದ ಹವಾಡ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಯೋಗ ಚಾಂಪಿಯನ್‌ಶಿಪ್‌ನಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿದ ಹಂಪಿಯ ಬಾಲ ಯೋಗಪಟುಗಳು ಚಿನ್ನ, ಬೆಳ್ಳಿ ಪದಕ ಗೆದ್ದಿದ್ದಾರೆ.
ನಾಗಮ್ಮ ಮತ್ತು ಗಣೇಶ್ ಎಂಬಿಬ್ಬರು 16-18 ವರ್ಷದೊಳಗಿನ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಮಹಿಳಾ ವಿಭಾಗದಲ್ಲಿ ನಾಗಮ್ಮ ಮೊದಲ ಸ್ಥಾನ ಪಡೆದು ಚಿನ್ನ ಗೆದ್ದರು. ಪುರುಷರ ವಿಭಾಗದಲ್ಲಿ ಗಣೇಶ್ ದ್ವಿತೀಯ ಸ್ಥಾನ ಗಳಿಸಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.
ಈ ಇಬ್ಬರು ಬಾಲ ಪ್ರತಿಭೆಗಳು ಹಂಪಿಯ ಬೀದಿಬದಿ ವ್ಯಾಪಾರಿಗಳ ಮಕ್ಕಳು. ಇಲ್ಲಿನ ರಂಜು ಆರ್ಟ್ಸ್ ಯೋಗ ಟ್ರಸ್ಟ್ನಲ್ಲಿ ಅಂದಾಜು 100 ಮಕ್ಕಳಿಗೆ ಉಚಿತವಾಗಿದ್ದ ಯೋಗಾಭ್ಯಾಸದಲ್ಲಿ ಭಾಗಿಯಾಗುತ್ತಿದ್ದರು. ಮಕ್ಕಳ ಪ್ರತಿಭೆ ಗುರುತಿಸಿ ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆ ಮಾಡಲಾಗಿತ್ತು. ಇಲ್ಲಿ ವಿಜೇತರಾಗಿ ಥಾಯ್ಲೆಂಡ್‌ನಲ್ಲಿ ನಡೆಯುವ ಸ್ಪರ್ಧೆಗೆ ಆಯ್ಕೆಯಾಗಿದ್ದರು.
ಆರ್ಥಿಕ ಸಮಸ್ಯೆಯಿಂದಾಗಿ ಇವರಿಗೆ ಹಲವರು ಧನಸಹಾಯ ಮಾಡಿದ್ದು, ಈ ನೆರವಿನ ಮಖಾಂತರ ಥಾಯ್ಲೆಂಡ್‌ಗೆ ತೆರಳಿದ್ದರು. ವಿದ್ಯಾರ್ಥಿಗಳೊಂದಿಗೆ ಯೋಗ ವ್ಯವಸ್ಥಾಪಕಿ ಬಿ.ಪಿ.ರಂಜಾನ್, ಯೋಗ ಕೋಚ್ ಫಕ್ರುದ್ದೀನ್ ಭಾಗವಹಿಸಿದ್ದರು.
ಹೊನ್ನಾವರದ ಬಾಲಕಿಗೆ ವುಶುನಲ್ಲಿ ಚಿನ್ನ: ಇತ್ತೀಚಿಗೆ ಮೈಸೂರಿನ ಚಾಮುಂಡಿ ವಿಹಾರದ ಇಂಡೋರ್ ಸ್ಟೇಡಿಯಂನಲ್ಲಿ ನಡೆದ ಖೇಲೋ ಇಂಡಿಯಾ ರಾಜ್ಯ ಮಟ್ಟದ ವುಶು ಲೀಗ್ ಸಬ್ ಜೂನಿಯರ್ಸ್ ವಿಭಾಗದಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ ನಡೆದ ಶಾನ್ಸುನಲ್ಲಿ (ಫೈಟ್) ಹೊನ್ನಾವರದ ಯಶಿಕಾ ನಾಯ್ಕ ಚಿನ್ನದ ಪದಕ ಗಳಿಸಿದ್ದರು. ಈ ಹಿಂದೆ ಕೂಡ ರಾಜ್ಯ ಮಟ್ಟದ ವುಶು ಲೀಗ್ ಶಾನ್ಸು ಫೈಟ್ ವಿಭಾಗದಲ್ಲಿ ನಾಲ್ಕು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಗೆದ್ದಿದ್ದರು.
ಯಶಿಕಾ ನಾಯ್ಕ ಮುಗ್ವಾ ಗ್ರಾಮ ಪಂಚಾಯತಿ ಕ್ಲರ್ಕ್ ಕಿರಣ್ ಕುಮಾರ್ ನಾಯ್ಕ ಹಾಗೂ ನವಿಲಗೋಣ ಗ್ರಾಮ ಪಂಚಾಯತಿಯ ಕ್ಲರ್ಕ್ ಆಗಿರುವ ಸುಜಾತ ದಂಪತಿಯ ಪುತ್ರಿ. ಹೊನ್ನಾವರದ ಮಾರ್ಥೋಮಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ಯಶಿಕಾ, ಹೊನ್ನಾವರದ ರಾಯಲ್ ಅಕಾಡೆಮಿಯ ರಾಘವೇಂದ್ರರಿಂದ ತರಬೇತಿ ಪಡೆಯುತ್ತಿದ್ದಾರೆ. ಚಿಕ್ಕಂದಿನಿಂದಲೂ ಶಿಕ್ಷಣ ಹಾಗೂ ಮಾರ್ಷಲ್ ಆರ್ಟ್ಸ್‌ನಲ್ಲಿ ವಿಶೇಷ ಆಸಕ್ತಿ ಹೊಂದಿರುವ ಯಶಿಕಾ, ಮುಂದೆ ರಾಷ್ಟ್ರೀಯ ಮಟ್ಟದಲ್ಲೂ ಮಿಂಚಲು ಸಿದ್ಧತೆ ನಡೆಸುತ್ತಿದ್ದಾರೆ.