ಹೊಸಪೇಟೆ: ಕೊರೊನಾದಿಂದ ನಿರ್ಬಂಧ ಹೇರಲಾಗಿದ್ದ ತುಂಗಭದ್ರಾ ಜಲಾಶಯಕ್ಕೆ ನವೆಂಬರ್ 24ರಿಂದ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗಿದ್ದು, ಭೇಟಿ ನೀಡುವವರ ಸಂಖ್ಯೆ ಏರಿಕೆಯಾಗಿ ಜಲಾಶಯಕ್ಕೆ ಮತ್ತೆ ಜೀವಕಳೆ ಬಂದಿದೆ.
ಮಾರ್ಚ್ 22ರಿಂದ ನವೆಂಬರ್ 23ರವರೆಗೆ ಜಲಾಶಯದ ಭೇಟಿಗೆ ನಿರ್ಬಂಧ ಹೇರಲಾಗಿತ್ತು. ಇದರಿಂದ ಮಂಡಳಿಗೆ ಅಂದಾಜು 50 ಲಕ್ಷ ರೂ. ನಷ್ಟವಾಗಿತ್ತು. ನ.24ರಿಂದ ಪ್ರವಾಸಿಗರ ಭೇಟಿಗೆ ಅವಕಾಶ ನೀಡಿದ್ದು, ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ದೊರೆತಿದೆ.
ತುಂಗಭದ್ರಾ ಜಲಾಶಯವು ನೇರ ಹಾಗೂ ಪರೋಕ್ಷವಾಗಿ ವ್ಯಾಪರ ವಹಿವಾಟಿಗೂ ಸಹಕಾರಿಯಾಗಿದೆ. ಜಲಾಶಯ ನೆಚ್ಚಿಕೊಂಡು ನೂರಾರು ಕುಟುಂಬಗಳು ಜೀವನ ಸಾಗಿಸುತ್ತಿವೆ. ಕೊರೊನಾದಿಂದಾಗಿ ಲಾಕ್ಡೌನ್ ವೇಳೆ ಸಂಕಷ್ಟ ಎದುರಿಸಿದ್ದರು.
ವಿದ್ಯುತ್ ಉತ್ಪಾದನೆ: 2019ರಲ್ಲಿ 180 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗಿತ್ತು. ಈ ಬಾರಿ ನವೆಂಬರ್ ತಿಂಗಳ ಅಂತ್ಯಕ್ಕೆ 102 ಮಿಲಿಯನ್ ಯುನಿಟ್ ಉತ್ಪಾದನೆ ಆಗಿದೆ. ವರ್ಷದ ಅಂತ್ಯಕ್ಕೆ 180 ಮಿಲಿಯನ್ ಯುನಿಟ್ ವಿದ್ಯುತ್ ಉತ್ಪಾದನೆ ಗುರಿ ಇರಿಸಿಕೊಳ್ಳಲಾಗಿದೆ. ಜಲಾಶಯ ಹಾಗೂ ಹಂಪಿ ಪವರ್ ಹೌಸ್ನಲ್ಲಿ ವಿದ್ಯುತ್ ಉತ್ಪಾದನೆ ಘಟಕವಿದೆ. ಉತ್ಪಾದನೆಯಲ್ಲಿ ಶೇ 80ರಷ್ಟು ಆಂಧ್ರಪ್ರದೇಶ ಹಾಗೂ ಶೇ 20ರಷ್ಟು ಕರ್ನಾಟಕಕ್ಕೆ ಹಂಚಿಕೆ ಮಾಡಿಕೊಳ್ಳುತ್ತವೆ.
ಉತ್ತಮ ಒಳಹರಿವು: ಜಲಾಶಯ ವ್ಯಾಪ್ತಿಯಲ್ಲಿ ಈ ಬಾರಿ ಉತ್ತಮ ಮಳೆಯಾಗಿದೆ. ಪ್ರಸಕ್ತ ವರ್ಷದಲ್ಲಿ 287 ಟಿಎಂಸಿ ನೀರು ಹರಿದು ಬಂದಿದೆ. ಈ ಪೈಕಿ 113 ಟಿಎಂಸಿ ನೀರು ನದಿಗೆ ಹರಿಸಲಾಗಿದೆ. ಈಗ ಸದ್ಯ 82 ಟಿಎಂಸಿ ನೀರು ಸಂಗ್ರಹವಾಗಿದೆ.