ಬಳ್ಳಾರಿ: ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್ ಉಪಮೇಯರ್ ಆಯ್ಕೆಗೆ ತೆರೆ ಬಿದ್ದಿದೆ. ಇದೇ ಮೊದಲ ಬಾರಿಗೆ ಅತಿ ಕಿರಿಯ ವಯಸ್ಸಿನ ಪಾಲಿಕೆ ಸದಸ್ಯರು, ಕಿರಿಯ ವಯಸ್ಸಿನ ಮೇಯರ್ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಅದೂ ಇಡೀ ರಾಜ್ಯದಲ್ಲೇ ಕಿರಿಯ ವಯಸ್ಸಿನಲ್ಲಿ ಮೇಯರ್ ಆಗಿ ಅಧಿಕಾರ ಸ್ವೀಕರಿಸಿದ ಖ್ಯಾತಿಗೆ ತ್ರಿವೇಣಿ ಅವರು ಭಾಜನರಾಗಿದ್ದಾರೆ.
ಹೌದು, ಬಳ್ಳಾರಿಯ 4ನೇ ವಾರ್ಡ್ನ ಸದಸ್ಯೆ ತ್ರಿವೇಣಿ ಅವರು ಮೇಯರ್ ಪಟ್ಟ ಅಲಂಕರಿಸಿ ದಾಖಲೆ ಬರೆದಿದ್ದಾರೆ. ತ್ರಿವೇಣಿ ಅವರು ಕಾಂಗ್ರೆಸ್ ಮುಖಂಡ ಡಿ ಸೂರಿ ಅವರ ಪುತ್ರಿ. ಉಪಮೇಯರ್ ಆಗಿ 33ನೇ ವಾರ್ಡ್ ನ ಜಾನಕಮ್ಮ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ ಇಬ್ಬರು ಮೇಯರ್ ಗಳನ್ನು ಬಳ್ಳಾರಿ ನಗರಕ್ಕೆ ನೀಡಿದ್ದು ಒಂದೇ ಕುಟುಂಬ ಎಂಬ ಖ್ಯಾತಿಯೂ ಡಿ. ಸೂರಿಯವರದ್ದಾಗಿದೆ. ಹಾಲಿ ನೂತನ ಮೇಯರ್ ತ್ರಿವೇಣಿ ಅವರ ತಾಯಿ ಈ ಹಿಂದೆ 2019ರಲ್ಲಿ ಮೇಯರ್ ಆಗಿ ಕಾರ್ಯ ನಿರ್ವಹಿಸಿದ್ದರು.
ಇದನ್ನೂ ಓದಿ : Explained: ಚುನಾವಣಾ ನೀತಿ ಸಂಹಿತೆ ಎಂದರೇನು? ತಿಳಿಯಬೇಕಾದ 10 ನಿಯಮಗಳು
ನಾಲ್ಕನೇ ವಾರ್ಡ್ನ ಕಾಂಗ್ರೆಸ್ ಪಾಲಿಕೆ ಸದಸ್ಯೆಯಾಗಿರುವ ತ್ರಿವೇಣಿ ಅವರಿಗೆ 23 ವರ್ಷ ವಯಸ್ಸು. ಸದರಿ ಪಾಲಿಕೆಯ ಚುನಾವಣೆ ವೇಳೆ ಗೆದ್ದ ಸಣ್ಣ ವಯಸ್ಸಿನ ಸದಸ್ಯೆ ಇವರಾಗಿದ್ದರು. ಆಗ ಇವರ ವಯಸ್ಸು 21 ವರ್ಷ. ಹೆಲ್ತ್ ಇನ್ಸ್ಪೆಕ್ಟರ್ ಕೋರ್ಸ್ ಪೂರೈಸಿರುವ ತ್ರಿವೇಣಿ ಮೇಯರ್ ಆಗಲು ಸಹಕಾರ ನೀಡಿದ ಎಲ್ಲಾ ಪಾಲಿಕೆ ಸದಸ್ಯರಿಗೆ ಪಕ್ಷದ ಮುಖಂಡರಿಗೆ ಧನ್ಯವಾದ ಅರ್ಪಿಸಿದರು.
ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ: ವಿವಿಧ ಪಕ್ಷಗಳ ಸದ್ಯದ ಬಲಾಬಲ ಹೀಗಿದೆ..
ಪಾಲಿಕೆ ಅಭಿವೃದ್ಧಿ ಕಾರ್ಯ ನಿರ್ವಹಿಸುತ್ತೇನೆ-ತ್ರಿವೇಣಿ: ಅತಿ ಕಿರಿಯ ವಯಸ್ಸಿನ ಪಾಲಿಕೆ ಸದಸ್ಯೆಯಾಗಿ ಅಯ್ಕೆ ಆಗಿದ್ದೆ. ಇದೀಗ ಮೇಯರ್ ಆಗಿದ್ದೇನೆ. ನಾನು ಕನಸು ಮನಸ್ಸಿನಲ್ಲೂ ಊಹಿಸಿದ್ದನ್ನು ನನ್ನ ತಂದೆ ಸಾಕಾರ ಮಾಡಿದ್ದಾರೆ. ತುಂಬಾ ಖುಷಿಯಾಗಿದೆ. ಎಲ್ಲರ ಜೊತೆಗೂಡಿ ಪಾಲಿಕೆಯ ಅಭಿವೃದ್ಧಿ ಕಾರ್ಯಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತೇನೆ ಎಂದು ಮಾಧ್ಯಮದವರಿಗೆ ತಿಳಿಸಿದರು.
ಇದನ್ನೂ ಓದಿ : ಕರ್ನಾಟಕ ವಿಧಾನಸಭೆ ಚುನಾವಣೆ: ಮೇ 10ಕ್ಕೆ ಮತದಾನ, 13ಕ್ಕೆ ಫಲಿತಾಂಶ
ರಾಜ್ಯಸಭೆ ಕಾಂಗ್ರೆಸ್ ಸದಸ್ಯ ಸಯ್ಯದ್ ನಾಸಿರ್ ಹುಸೇನ್ ನಾಮಪತ್ರ ವಾಪಸ್ ಪಡೆಯಲು ಉಮಾದೇವಿ ಅವರಿಗೆ ಸೂಚಿಸಿದರು. ಕಾಂಗ್ರೆಸ್ ಪಕ್ಷದ ಕುಬೇರ ಮತ್ತು ಉಮಾದೇವಿ ನಾಮ ಪತ್ರ ಪಡೆದಿದ್ದರಿಂದ ಡಿ. ತ್ರಿವೇಣಿ ಮತ್ತು ನಾಗರತ್ನ ಅವರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಹಾಜರಿದ್ದ 44 ಜನ ಮತದಾನದ ಹಕ್ಕು ಪಡೆದ ಸದಸ್ಯರು, ಸಂಸದರು, ಶಾಸಕರು ಮತದಾನದಲ್ಲಿ ಪಾಲ್ಗೊಂಡರು. ತ್ರಿವೇಣಿಗೆ 28 ಮತ್ತು ನಾಗರತ್ನಗೆ ನಿರೀಕ್ಷೆಯಂತೆ 16 ಮತಗಳು ಬಂದವು. ತ್ರಿವೇಣಿ ಆಯ್ಕೆಯನ್ನು ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಘೋಷಣೆ ಮಾಡಿದರು. ಪಾಲಿಕೆ ಆಯುಕ್ತ ರುದ್ರೇಶ್, ಎಡಿಸಿ ಅವರು ಇದ್ದರು.
ಇದನ್ನೂ ಓದಿ : ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಎಫೆಕ್ಟ್: ಸಿಎಂ ಜಿಲ್ಲಾ ಪ್ರವಾಸ ಹಠಾತ್ ರದ್ದು