ಬಳ್ಳಾರಿ: ಮಾಜಿ ಸಚಿವ ಎಂ. ದಿವಾಕರ್ ಬಾಬು ಅವರ ಮಾನನಷ್ಟ ಪ್ರಕರಣದ ವಿಚಾರಣೆ ಹಿನ್ನಲೆಯಲ್ಲಿ ನಗರದ ಜಿಲ್ಲಾ ನ್ಯಾಯಾಲಯಕ್ಕೆ (ಜೆಎಂಎಫ್ಸಿ) ಇಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಹಾಜರಾಗಿದ್ದರು.
ಕೆಂಪು ಬಣ್ಣದ ಅಂಗಿಯನ್ನುಟ್ಟಿದ್ದ ಜನಾರ್ದನ ರೆಡ್ಡಿ ಹಾಗೂ ಅಯ್ಯಪ್ಪಸ್ವಾಮಿ ಮಾಲೆ ಧರಿಸಿದ್ದ ಶಾಸಕ ಬಿ. ಶ್ರೀರಾಮುಲು ತಮ್ಮ ವಕೀಲರೊಂದಿಗೆ ನ್ಯಾಯಾಧೀಶರ ಮುಂದೆ ಹಾಜರಾದರು.
ಮಾಜಿ ಸಚಿವ ಎಂ. ದಿವಾಕರ್ ಬಾಬು ಅವರ ವಿರುದ್ಧ ಅವಹೇಳನಕಾರಿಯಾದ ವರದಿಯನ್ನು ಮಾಜಿ ಸಚಿವ ಜನಾರ್ದನರೆಡ್ಡಿ ಮಾಲೀಕತ್ವದ ಈ ನಮ್ಮ ಕನ್ನಡನಾಡು ದಿನ ಪತ್ರಿಕೆಯಲ್ಲಿ ಪ್ರಕಟಿಸಲಾಗಿತ್ತು. ಸುಪ್ರೀಂಕೋರ್ಟ್ ಬಳ್ಳಾರಿ ಪ್ರವೇಶ ನಿರ್ಬಂಧ ಹೇರಿದ್ದರಿಂದ ಇಷ್ಟು ದಿನ ಕೋರ್ಟ್ಗೆ ಹಾಜರಾಗಿರಲಿಲ್ಲ. ಇಂದು ರೆಡ್ಡಿ, ಶ್ರೀರಾಮುಲು ಸೇರಿ ನಾಲ್ವರು ಹಾಜರಾಗಿದ್ದಾರೆ.
ಸದ್ಯ ಈ ಪ್ರಕರಣವನ್ನು ಬೆಂಗಳೂರಿನ ಕೋರ್ಟಿಗೆ ಹಸ್ತಾಂತರ ಮಾಡಲಾಗಿದೆ. ಇದೊಂದು ಪ್ರಕರಣ ಕೋರ್ಟಿನಲ್ಲಿತ್ತು. ಕೋರ್ಟ್ ಆದೇಶದ ಹಿನ್ನೆಲೆ ಹಾಜರಾಗಿದ್ದೇನೆ ಎಂದು ಜರ್ನಾದನರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ.