ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ಮನೆ ಕುಸಿತಗೊಂಡು ಮೂವರು ಸಾವನ್ನಪ್ಪಿದ್ದು, ತೊಟ್ಟಿಲಿನಲ್ಲಿ ಮಲಗಿದ್ದ 36 ದಿನಗಳ ಹಸುಗೂಸು ಅದೃಷ್ಟವಶಾತ್ ಸಾವಿನಿಂದ ಪಾರಾಗಿರುವ ಘಟನೆ ನಡೆದಿದೆ.
ಗ್ರಾಮದ ನಿವಾಸಿ ಖಾದರ್ ಬಾಷಾ ಎಂಬುವರ ಮನೆ ಕುಸಿತಗೊಂಡಿದ್ದು, ಈ ಮನೆಯಲ್ಲಿನ ಮಂಚದ ತೊಟ್ಟಿಲಿನಲ್ಲಿ ಮಲಗಿದ್ದ 36 ದಿನಗಳ ಹಸುಗೂಸು ಹಾಗೂ ಮನೆಯ ಗೋಡೆಯಂಚಿನಲ್ಲಿ ಮಲಗಿದ್ದ ಮೆಹಬೂಬ್ (11) ಬದುಕುಳಿದ್ದಾರೆ. ಅವರಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ಕುಟುಂಬದ ಮೂಲಗಳು ತಿಳಿಸಿವೆ.ಕಳೆದ ಎರಡು ಮೂರು ದಿನಗಳಿಂದ ಸ್ವಲ್ಪ ಮಳೆಯಾಗಿದ್ದು. ಇದು ಹಳೆಯ ಕಾಲದ ಮಣ್ಣಿನ ಮನೆಯಾಗಿದ್ದರಿಂದ ಮಳೆಗೆ ನೆನೆದು ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಶಾಸಕರ ಭೇಟಿ ;
ಇನ್ನು ಸಿರುಗುಪ್ಪ ವಿಧಾನಸಭಾ ಕ್ಷೇತ್ರದಲ್ಲಿಯೇ ಇದ್ದ ಶಾಸಕ ಸೋಮ ಲಿಂಗಪ್ಪನವ್ರು ಕೂಡಲೇ ಸ್ಥಳಕ್ಕೆ ಭೇಟಿಕೊಟ್ಟು, ತಾತ್ಕಾಲಿಕ 30 ಸಾವಿರ ರೂ.ಪರಿಹಾರ ಧನ ಘೋಷಣೆ ಮಾಡಿದ್ದಾರೆ. ಮೃತರ ಅವಲಂಬಿತರಿಗೆ ಅಗತ್ಯ ಅನುದಾನ ಒದಗಿಸಿ ಕೊಡುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ , ಈ ಕುರಿತು ಜಿಲ್ಲಾಡಳಿತದೊಂದಿಗೆ ಚರ್ಚಿಸುವೆ ಎಂದು ಶಾಸಕರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.