ಬಳ್ಳಾರಿ: ಬಹು ದಿನಗಳಿಂದ ನನೆಗುದಿಗೆ ಬಿದ್ದಿರುವ ಗಣಿ ಜಿಲ್ಲೆಯ ಅಂಕೋಲ-ಗುತ್ತಿ ಮಾರ್ಗದ ರಾಷ್ಟ್ರೀಯ ಹೆದ್ದಾರಿ 63ರ ಅಭಿವೃದ್ಧಿ ಕಾಯಕಲ್ಪಕ್ಕೆ ನ್ಯಾಷನಲ್ ಹೈವೇ ಅಥಾರಿಟಿ ಬೋರ್ಡ್ ಮೂರು ತಿಂಗಳ ಗಡುವು ನೀಡಿದೆ.
ಮುಂದಿನ ಮೂರು ತಿಂಗಳೊಳಗೆ ಅಭಿವೃದ್ಧಿ ಕಾರ್ಯಕ್ಕೆ ಕೈಹಾಕದೆ ಹೋದರೆ ಗ್ಯಾಮನ್ ಇಂಡಿಯಾದ ಮೇಲೆ ನ್ಯಾಷನಲ್ ಹೈವೇ ಅಥಾರಿಟಿ ಬೋರ್ಡ್ ಶಿಸ್ತು ಕ್ರಮಕ್ಕೆ ಮುಂದಾಗುವ ಸಾಧ್ಯತೆಯಿದೆ.
ಜಿಲ್ಲೆಯ ಹೊಸಪೇಟೆ - ಬಳ್ಳಾರಿ ಮಾರ್ಗವಾಗಿ ಅಂಕೋಲ - ಗುತ್ತಿ ಮಾರ್ಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು, ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಈ ರಸ್ತೆಯ ಅಭಿವೃದ್ಧಿ ಕಾರ್ಯ ಕುಂಟುತ್ತಾ ಸಾಗಿದೆ. ಗ್ಯಾಮನ್ ಇಂಡಿಯಾ ಸಹಭಾಗಿತ್ವದಲ್ಲಿ ನಡೆಯುವ ಈ ರಸ್ತೆ ಅಭಿವೃದ್ಧಿ ಕಾರ್ಯಕ್ಕೆ ಅನೇಕ ಅಡೆತಡೆ ಉಂಟಾಗಿದ್ದು, ಸೂಕ್ತ ಅನುದಾನದ ಕೊರತೆ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನ ಆ ಕಂಪನಿ ಎದುರಿಸುತ್ತಿದೆ ಎನ್ನಲಾಗುತ್ತಿದೆ.
ಹೀಗಾಗಿ ಆ ಕಂಪನಿಯ ಪರವಾನಗಿ ರದ್ಧತಿ ಸೇರಿದಂತೆ ಇಲ್ಲಿನ ವಾಸ್ತವತೆಯ ಬಗ್ಗೆ ಜಿಲ್ಲಾಡಳಿತ ಈಗಾಗಲೇ ನ್ಯಾಷನಲ್ ಹೈವೇ ಅಥಾರಿಟಿಗೆ ಸವಿವರವಾದ ಪತ್ರವನ್ನ ಬರೆದಿದೆ. ಆದ್ರೆ, ನ್ಯಾಷನಲ್ ಹೈವೇ ಅಥಾರಿಟಿ ಬೋರ್ಡ್ ಮಧ್ಯಪ್ರವೇಶಿಸಿ ಮತ್ತೊಂದು ಅವಕಾಶ ನೀಡುವಂತೆ ಸೂಚಿಸಿದ ಅನ್ವಯ ಈಗ ಗ್ಯಾಮನ್ ಇಂಡಿಯಾ ಕಂಪನಿಗೆ ಮತ್ತೊಂದು ಅವಕಾಶ ನೀಡಲಾಗಿದೆ.
ಈ ಸಂಬಂಧ ಈಟಿವಿ ಭಾರತದೊಂದಿಗೆ ಮಾತನಾಡಿದ ಡಿಸಿ ಎಸ್.ಎಸ್.ನಕುಲ್, ಗ್ಯಾಮನ್ ಇಂಡಿಯಾ ಕಂಪನಿಗೆ ಕೆಲವೊಂದು ಷರತ್ತನ್ನ ವಿಧಿಸಿ ಮತ್ತೊಂದು ಅವಕಾಶವನ್ನ ನೀಡಲಾಗಿದೆ. ಅಂಕೋಲ- ಗುತ್ತಿ ಮಾರ್ಗದ ಎನ್ಹೆಚ್-63ರ ಅಭಿವೃದ್ಧಿಗೆ ಈ ಮುಂದಿನ ಮೂರು ತಿಂಗಳೊಳಗೆ ಕಾಯಕಲ್ಪ ನೀಡೋ ಜವಾಬ್ದಾರಿ ಅವರದ್ದಾಗಿರುತ್ತೆ ಎಂದು ತಿಳಿಸಿದ್ದಾರೆ.
ಅಪಘಾತ ವಲಯ: ಬಳ್ಳಾರಿ-ಹೊಸಪೇಟೆ ಮಾರ್ಗದಲ್ಲಿ ಭಾರೀ ಪ್ರಮಾಣದ ರಸ್ತೆ ಅಪಘಾತಗಳು ಸಂಭವಿಸಿ ಸಾವು-ನೋವು ಹೆಚ್ಚಾಗಿ ಕಂಡು ಬರುತ್ತಿವೆ. ಕೂಡಲೇ ಈ ರಸ್ತೆಯ ಅಭಿವೃದ್ಧಿಯ ಕಾಯಕಲ್ಪಕ್ಕೆ ಚಾಲನೆ ನೀಡಿದ್ರೆ ಸಾಕು. ಕೊಂಚ ಮಟ್ಟಿಗೆ ಅಪಘಾತಗಳು ಸಂಭವಿಸೋದು ಕಡಿಮೆಯಾಗಲಿದೆ ಎಂಬುದು ಜಿಲ್ಲೆಯ ಸಾರ್ವಜನಿಕರ ಅಭಿಪ್ರಾಯವಾಗಿದೆ.