ಬಳ್ಳಾರಿ: ದನಗಳಿಗೆ ಸೊಳ್ಳೆಗಳ ಕಾಟ ತಪ್ಪಿಸಲು ಹಾಕಿದ್ದ ಬೆಂಕಿ ಆಕಸ್ಮಿಕವಾಗಿ ಹೊತ್ತಿಕೊಂಡ ಹಿನ್ನೆಲೆ ಕೊಟ್ಟಿಗೆ ಸಂಪೂರ್ಣ ಭಸ್ಮವಾಗಿ, 3 ಹಸುಗಳು ಸಜೀವ ದಹನವಾಗಿರುವ ದುರ್ಘಟನೆ ಕೂಡ್ಲಿಗಿ ತಾಲೂಕಿನ ಹುರುಳಿಹಾಳು ಗ್ರಾಮದಲ್ಲಿ ನಡೆದಿದೆ.
ಹುರುಳಿಹಾಳು ಗ್ರಾಮದ ಶ್ರೀ ಹೊನ್ನಾಂಬಿಕಾ ದೇವಸ್ಥಾನದ ಪೂಜಾರಿ ರೇವಣ್ಣ ಅವರಿಗೆ ಸೇರಿದ ಹಸುಗಳು ಸುಟ್ಟು ಕರಕಲಾಗಿವೆ. ದೇವಸ್ಥಾನದ ಪಕ್ಕದಲ್ಲೇ ದನದ ಕೊಟ್ಟಿಗೆ ಹಾಕಿಕೊಂಡು ಆರೇಳು ಹಸುಗಳನ್ನು ಸಾಕಿಕೊಂಡಿದ್ದ ರೇವಣ್ಣ, ಹಸುಗಳಿಗೆ ರಾತ್ರಿ ವೇಳೆ ಸೊಳ್ಳೆಗಳ ಕಾಟ ತಪ್ಪಿಸಲು ಕೊಟ್ಟಿಗೆಯಲ್ಲಿ ಹೊಗೆ ಹಾಕಿ ಮನೆಗೆ ಹೋಗಿದ್ದಾರೆ. ಅವರು ತೆರಳಿದ ನಂತರ ಬೆಂಕಿ ಕಾಣಿಸಿಕೊಂಡು ಕೊಟ್ಟಿಗೆ ಹೊತ್ತಿ ಉರಿದಿದೆ. ಕೊಟ್ಟಿಗೆಯಲ್ಲಿದ್ದ 6-7 ಹಸುಗಳ ಪೈಕಿ ಮೂರ್ನಾಲ್ಕು ಪಾರಾಗಿವೆ. ಅಲ್ಲೇ ಇದ್ದ 3 ಹಸುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ಜೀವನೋಪಾಯಕ್ಕಾಗಿ ಇದ್ದ ಹಸುಗಳ ಸಾವಿನಿಂದ ತುಂಬಾ ನಷ್ಟವಾಗಿದೆ ಎಂದು ರೇವಣ್ಣ ಅಳಲು ತೋಡಿಕೊಂಡರು.
ದನದ ಕೊಟ್ಟಿಗೆಗೆ ಬೆಂಕಿ ಕಾಣಿಸಿಕೊಂಡಿದ್ದಲ್ಲದೆ ಪಕ್ಕದಲ್ಲೇ ಇದ್ದ ಶುದ್ಧ ನೀರಿನ ಘಟಕದ ವಿದ್ಯುತ್ ಸರಬರಾಜಿಗೆ ಬೆಂಕಿ ತಗುಲಿ ಶಾರ್ಟ್ ಸರ್ಕ್ಯೂಟ್ ಆಗಿ ನೀರಿನ ಘಟಕದ ತಾಂತ್ರಿಕ ಸಲಕರಣೆಗಳು ಸುಟ್ಟು ಹಾನಿಯಾಗಿ ನಷ್ಟವಾಗಿರುವುದು ತಿಳಿದಿದೆ. ಇದನ್ನು ಕಂಡ ಗ್ರಾಮದ ಜನರು ಬೆಂಕಿ ನಂದಿಸಲು ಯತ್ನಿಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ಘಟನಾ ಸ್ಥಳಕ್ಕೆ ಗುಡೇಕೋಟೆ ಕಂದಾಯ ಪರಿವೀಕ್ಷಕ ಚೌಡಪ್ಪ ಹಾಗೂ ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.