ಬಳ್ಳಾರಿ: ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಸೂಚನೆಯ ಮೇರೆಗೆ ನಗರಾಭಿವೃದ್ಧಿ ಪ್ರಾಧಿಕಾರ (ಬುಡಾ) ಹಾಗೂ ಮಹಾನಗರ ಪಾಲಿಕೆ ಪ್ರಭಾರಿ ಆಯುಕ್ತರಾಗಿ ಅಧಿಕಾರವಹಿಸಿಕೊಂಡ ಈರಪ್ಪ ಬಿರಾದಾರ ಅವರು, ಫಾರಂ ನಂ 2 ಅನ್ನು ನೇರವಾಗಿ ಫಲಾನುಭವಿಗಳ ಮನೆಗೆ ಕಳುಹಿಸಿಕೊಡಲು ಚಿಂತನೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಫಾರಂ ನಂ 2ಗೆ ನಿಗದಿಪಡಿಸಿದ ಶುಲ್ಕವನ್ನ ಪಾವತಿಸಿದ್ರೆ ಸಾಕು, ಅವರೇನೋ ಅರ್ಜಿ ನಮೂನೆ ಪಡೆಯಲು ಮಹಾನಗರ ಪಾಲಿಕೆ ಆಯುಕ್ತರ ಕಚೇರಿಗೆ ಅಲೆದಾಟ ನಡೆಸಬೇಕಿಲ್ಲ. ಫಲಾನುಭವಿಗಳ ಮನೆ ಬಾಗಿಲಿಗೆ ನೇರವಾಗಿ ಫಾರಂ ಅನ್ನು ಕಳುಹಿಸಿಕೊಡಲು ಚಿಂತನೆ ನಡೆಸಲಾಗಿದೆ ಎಂದು ಪ್ರಭಾರ ಆಯುಕ್ತ ಈರಪ್ಪ ಬಿರಾದಾರ ತಿಳಿಸಿದ್ದಾರೆ.
ನಂತರ ಮಾತನಾಡಿದ ಅವರು, ನಾನು ಅಧಿಕಾರವಹಿಸಿಕೊಂಡ ಬಳಿಕ ಈ ಫಾರಂ ನಂ 2 ಅನ್ನು ವಿಲೇವಾರಿಗೊಳಿಸುವ ಪ್ರಕ್ರಿಯೆಗೆ ತ್ವರಿತಗತಿಯಲ್ಲಿ ಚಾಲನೆ ನೀಡಿರುವೆ. ಬುಡಾ ಪರವಾಗಿ ಪಡೆದವುಗಳಿಗೆಲ್ಲವಕ್ಕೂ ಕೂಡ ಫಾರಂ ನಂ 2 ಅನ್ನು ಕೊಟ್ಟಿರುವೆ. ಟಿಎಸ್ ಹಾಗೂ ಆರ್ ಎಸ್ ನಂಬರ್ ಗಳುಳ್ಳ ಭೂಮಿಗಳಿಗೆಫಾರಂ ನಂ 2 ಅನ್ನು ವಿಲೇವಾರಿ ಮಾಡೋದೊಂದೆ ಬಾಕಿಯಿದೆ. ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರೊಂದಿಗೆ ಚರ್ಚಿಸಿ ಮುಂದಿನ ಎರಡು -ಮೂರು ದಿನಗಳಲ್ಲಿ ಕ್ಲಿಯರ್ ಮಾಡಲಾಗುವುದೆಂದರು.
ಫಾರಂ ನಂ 2 ನೀಡಲು ಲಕ್ಷಾಂತರ ರೂ.ಗಳ ಲಂಚದ ಹಣದ ಬೇಡಿಕೆ ಇಟ್ಟು ಅಮಾನತುಗೊಂಡಿದ್ದ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿಯಿಂದ ಎಚ್ಚೆತ್ತುಕೊಂಡ ಮಹಾನಗರ ಪಾಲಿಕೆ ಆಡಳಿತವು ಇದೀಗ ನಿಗದಿತ ಶುಲ್ಕ ಪಾವತಿಸಿದವರ ಮನೆಗೆ ನೇರವಾಗಿ ಕಳುಹಿಸಿಕೊಡುವ ವ್ಯವಸ್ಥೆ ಮಾಡಿಕೊಂಡಿದೆ.