ಬಳ್ಳಾರಿ: ನಗರದ ಎರಡು ಮನೆಗಳಲ್ಲಿ ಬಾಗಿಲು ಮುರಿದು ಬಂಗಾರ, ಬೆಳ್ಳಿ ದೋಚಿ ಪರಾರಿಯಾಗಿದ್ದ ಖದೀಮನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬ್ರೂಸ್ ಪೇಟೆ ಠಾಣೆಯ ವ್ಯಾಪ್ತಿಯಲ್ಲಿರುವ ಬಿ.ಸಂತೋಷ್ ಎನ್ನುವರ ಮನೆಯಲ್ಲಿ ಮಾರ್ಚ್ 17 ರಂದು ಮತ್ತು ಈ ಗುರುರಾಜ್ ಮನೆಯಲ್ಲಿ ಸೆಪ್ಟೆಂಬರ್ 3 ರಂದು ಮನೆ ಬಾಗಿಲು ಮುರಿದು ಬಂಗಾರ, ಬೆಳ್ಳಿ ದೋಚಿ ಕಳ್ಳರು ಪರಾರಿಯಾಗಿದ್ದರು. ಈ ಕುರಿತು ಮನೆ ಮಾಲೀಕರು ದೂರು ದಾಖಲಿಸಿದ್ದರು.
ದೂರು ಸ್ವೀಕರಿಸಿದ ಪೊಲೀಸರು ಕಾರ್ಯಾಚರಣೆ ನಡೆಸಿ, ಇಂದು ಆರೋಪಿಯನ್ನು ಬಂಧಿಸಿದ್ದಾರೆ. ಪಿ ಬಿ. ಭಾಸ್ಕರ್ (49) ಬಳ್ಳಾರಿಯ ಶ್ರೀರಾಂಪುರ ಕಾಲೋನಿ ನಿವಾಸಿ, ಬಂಧಿತ ಆರೋಪಿ. ಈತನಿಂದ 133.735 ಗ್ರಾಂ ಬಂಗಾರ, 178.650 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಠಾಣೆಯ ಇನ್ಸ್‌ಪೆಕ್ಟರ್ ಆರ್.ನಾಗರಾಜ್, ಅಪರಾಧ ವಿಭಾಗದ ಎ.ಎಸ್.ಐ ಮಲ್ಲಿಕಾರ್ಜುನ, ಸಿಬ್ಬಂದಿಗಳಾದ ಸರ್ದಾರ್ ಮುಜಾಹಿದ್ ಅಲಿ, ಉಮೇಶ್ ರೆಡ್ಡಿ ,ಪಿ. ಮಹಬೂಬ್, ಬಿ.ಮಾರೇಶ್, ಕೆ.ಹಾಲೇಶ್, ಕೆ.ಗುರುಬಸವರಾಜ್ ಹಾಜರಿದ್ದರು. ಈ ಕುರಿತು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.