ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ಈ ಮೆಡಿಕಲ್ ಗ್ಯಾಜೆಟ್ಗಳ ಕೊರತೆ ಇಲ್ಲ. ಅಗತ್ಯಕ್ಕನುಗುಣವಾಗಿ ಪಲ್ಸ್ ಆಕ್ಸಿಮೀಟರ್, ಗ್ಲುಕೋ ಥರ್ಮಾಮೀಟರ್ ಸೇರಿದಂತೆ ಇನ್ನಿತರೆ ಪರಿಕರಗಳಿದ್ದು, ಈಗಾಗಲೇ ಜಿಲ್ಲೆಯ ಆರ್ಆರ್ ಟೀಂ ಹಾಗೂ ಆಯಾ ತಾಲೂಕು ಆರೋಗ್ಯ ಕೇಂದ್ರಗಳಿಗೆ ಗ್ಯಾಜೆಟ್ಗಳ ಪೂರೈಕೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇನ್ನಿತರೆ ಕಾಯಿಲೆಗಳನ್ನು ಪಲ್ಸ್ ಆಕ್ಸಿಮೀಟರ್ ಹಾಗೂ ಗ್ಲುಕೋ ಥರ್ಮಾಮೀಟರ್ನ ಸಹಾಯದೊಂದಿಗೆ ತಿಳಿಯ ಬಹುದಾಗಿದೆ. ಹೀಗಾಗಿ, ಜಿಲ್ಲಾಡಳಿತ, ಅಜೀಂ ಪ್ರೇಮಜೀ ಫೌಂಡೇಷನ್ ಹಾಗೂ ಇತರೆ ಸರ್ಕಾರೇತರ ಸಂಸ್ಥೆಗಳ ಗಮನ ಸೆಳೆಯೋ ಮುಖೇನ ಈ ಮೆಡಿಕಲ್ ಗ್ಯಾಜೆಟ್ಗಳನ್ನ ಖರೀದಿಸಿ ಜಿಲ್ಲೆಯ ಆರ್ಆರ್ ಟೀಂ, ಆಶಾ ಕಾರ್ಯಕರ್ತರು ಮತ್ತು ಆಯಾ ತಾಲೂಕಿನ ಆರೋಗ್ಯ ಕೇಂದ್ರಗಳಿಗೆ ಪೂರೈಕೆ ಮಾಡಿದೆ. ಆ ಸಾಧನಾ ಸಲಕರಣೆಗಳನ್ನು ಬಳಸಿಕೊಂಡು ಪಲ್ಸ್ ಆಕ್ಸಿಮೀಟರ್ ಅನ್ನು ಚೆಕ್ ಮಾಡಲಾಗುತ್ತದೆ. ಮುಂಜಾಗ್ರತಾ ಕ್ರಮವಾಗಿ ಪಲ್ಸ್ ರೇಟ್ ಚೆಕ್ ಮಾಡಿದ್ದರ ಪರಿಣಾಮ ನೂರಾರು ಮಂದಿಯನ್ನು ಪ್ರಾಣಾಪಾಯದಿಂದ ತಪ್ಪಿಸಲು ಸಹಕಾರಿಯಾಗಿದೆ ಎಂತಲೂ ಹೇಳಬಹುದಾಗಿದೆ.
ಈ ಸಂಬಂಧ ಈ ಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಆರೋಗ್ಯಾಧಿಕಾರಿ(ಡಿಹೆಚ್ಓ) ಡಾ. ಹೆಚ್. ಎಲ್. ಜನಾರ್ದನ್, ಪಲ್ಸ್ ಆಕ್ಸಿಮೀಟರ್, ಗ್ಲುಕೋ ಥರ್ಮಾ ಮೀಟರ್ ಸಹಾಯದಿಂದ ಈಗಾಗಲೇ ಜಿಲ್ಲೆಯ ಮೂರು ತಾಲೂಕಿನಲ್ಲಿ ಮನೆ ಮನೆಗೆ ತೆರಳಿ ಸರ್ವೇ ಕಾರ್ಯವನ್ನ ಕೈಗೊಳ್ಳಲಾಗಿದೆ. ಅದರಿಂದ ಭಾರೀ ಪ್ರಮಾಣದ ಪ್ರಯೋಜನವೂ ಆಗಿದೆ. ಡೇಂಜರ್ ಝೋನ್ ನಲ್ಲಿರುವವರ ಪತ್ತೆಗೂ ಇದು ಸಹಕಾರಿಯಾಗಿದೆ. ನಮ್ಮಲ್ಲಿ ಪಲ್ಸ್ ಆಕ್ಸಿಮೀಟರ್ ಅಥವಾ ಗ್ಲುಕೋ ಥರ್ಮಾಮೀಟರ್ ಗಳ ಕೊರತೆಯಂತೂ ಆಗಿಲ್ಲ ಎಂದರು.