ಬಳ್ಳಾರಿ: ಸರ್ಕಾರಿ ನೌಕರರ ಸಂಘದ ಚಟುವಟಿಕೆ ಹೆಸರಲ್ಲಿ ನೌಕರಿಗೆ ಗೈರಾಗುವ ಅವಕಾಶವಿಲ್ಲ. ಈ ನಿಯಮ ಎಲ್ಲರಿಗೂ ಅನ್ವಯಿಸುತ್ತೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಕಚೇರಿಯಲ್ಲಿಂದು ಮಾತನಾಡಿದ ಅವರು, ಸರ್ಕಾರಿ ನೌಕರರನ್ನು ನಿಯಂತ್ರಿಸಲು ಆಯಾ ಇಲಾಖೆಗಳ ಮೇಲಾಧಿಕಾರಿಗಳಿದ್ದಾರೆ. ಸಂಘದ ಚಟುವಟಿಕೆ ಜೊತೆಜೊತೆಗೆ ತಮ್ಮ ನೌಕರಿಯನ್ನೂ ಕೂಡ ಸಮರ್ಥವಾಗಿ ನಿಭಾಯಿಸಬೇಕೆಂದರು.
ಸರ್ಕಾರಿ ಅಧಿಕಾರಿಗಳ ವಿರುದ್ಧ ಅನಾಮಧೇಯ ದೂರು ಬಂದರೆ ಅವುಗಳನ್ನು ಪರಿಶೀಲಿಸಿ ಪೂರಕ ಮಾಹಿತಿ ಸಿಕ್ಕ ನಂತರ ಕ್ರಮ ಕೈಗೊಳ್ಳಬೇಕು. ಸಂಘ ಐದು ಲಕ್ಷ ನೌಕರರ ನಾನಾ ಬೇಡಿಕೆ ಮತ್ತು ಹಿತ ಕಾಪಾಡಲು ಅವಿರತವಾಗಿ ಶ್ರಮಿಸುತ್ತಿದೆ. ಸರ್ಕಾರದ ಸಲಹೆ ಮತ್ತು ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಾ, ಸಂಘದಿಂದಲೂ ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ನೀಡುತ್ತಿದ್ದೇವೆ ಎಂದರು.
ರಾಜ್ಯದಲ್ಲಿನ ಸಂಘದ ಎಲ್ಲ ಕಚೇರಿಗಳಲ್ಲಿ ಕಂಪ್ಯೂಟರೀಕರಣಕ್ಕೆ ಸರ್ಕಾರ ರೂ. 3 ಕೋಟಿ ಅನುದಾನ ನೀಡಿದೆ. ಈಗಾಗಲೇ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಆರೋಗ್ಯ ಮತ್ತು ಶಿಕ್ಷಣ ಇಲಾಖೆ ಸೇರಿ ವಿವಿಧ ಇಲಾಖೆಗಳಲ್ಲಿ 2.5 ಲಕ್ಷ ಹುದ್ದೆಗಳು ಖಾಲಿಯಿದ್ದು, ಶೀಘ್ರ ಭರ್ತಿಗೆ ಒತ್ತಾಯಿಸಿದ್ದೇವೆ. 6 ಕೋಟಿಗೂ ಅಧಿಕ ಜನಸಂಖ್ಯೆಗೆ ತಕ್ಕ ಉದ್ಯೋಗ ಸೃಷ್ಟಿಯಾಗುತ್ತಿಲ್ಲ. ಈಗಿರುವ ಅಧಿಕಾರಿಗಳು ಮೂರ್ನಾಲ್ಕು ಕಡೆ ಕೆಲಸ ಮಾಡುವಂತಾಗಿದೆ. ಶಿಕ್ಷಕರ ವರ್ಗಾವಣೆ ಕಾಯ್ದೆಗೆ ತಿದ್ದುಪಡಿ ಮಾಡಿ, ದೂರದ ಊರುಗಳಿಗೆ ವರ್ಗಾಯಿಸುವ ಬದಲು 50 ಕಿ.ಮೀ. ವ್ಯಾಪ್ತಿಯಲ್ಲಿ ಬಳ್ಳಾರಿ ನಗರದಿಂದ ಹಳ್ಳಿಗೆ, ಹಳ್ಳಿಯಿಂದ ನಗರಕ್ಕೆ ವರ್ಗಾಯಿಸಬೇಕು ಎಂದು ಹೇಳಿದ್ರು.
ಶತಮಾನೋತ್ಸವ: 2020 ಮೇ ತಿಂಗಳಿಗೆ ಸಂಘ ಅಸ್ತಿತ್ವಕ್ಕೆ ಬಂದು ನೂರು ವರ್ಷಗಳಾಗಿದ್ದು, ಶತಮಾನೋತ್ಸವ ಸಮಾರಂಭ ಆಚರಿಸಲಾಗುತ್ತದೆ. ಈ ಹಿನ್ನೆಲೆ ಭವನಗಳ ನಿರ್ಮಾಣಕ್ಕೆ ಸರ್ಕಾರ ಅನುದಾನ ನೀಡಬೇಕು ಎಂದು ಷಡಕ್ಷರಿ ಕೋರಿದರು.