ಬಳ್ಳಾರಿ: ಪ್ರವಾಹ ಭೀತಿ ಎದುರಾಗುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಗಣಿ ಜಿಲ್ಲೆಯ ಅಂದಾಜು 66 ಗ್ರಾಮಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿ ನಕುಲ್, ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ತುಂಗ, ಭದ್ರಾ ಮತ್ತು ವೇದಾವತಿ ನದಿಗಳಿಂದ ಅಪಾರ ಪ್ರಮಾಣದ ನೀರು ತುಂಗಭದ್ರಾ ಜಲಾಶಯಕ್ಕೆ ಹರಿದು ಬರುವುದರಿಂದಲೇ ಜಿಲ್ಲೆಯ ಹಡಗಲಿ, ಹರಪನಹಳ್ಳಿ ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಪ್ರವಾಹ ಭೀತಿ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲೆಯ ಈ ಮೂರು ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಈಗಾಗಲೇ ಕಾಳಜಿ ಕೇಂದ್ರಗಳನ್ನ ತೆರೆಯಲಾಗಿ ಎಂದರು.
ಕಳೆದ ಬಾರಿ ಪ್ರವಾಹದ ಭೀತಿ ಎದುರಾಗಿದ್ದರಿಂದ ಅಂದಾಜು 3 ಸಾವಿರಕ್ಕೂ ಅಧಿಕ ಮಂದಿಯನ್ನ ಈ ಕಾಳಜಿ ಕೇಂದ್ರಗಳಲ್ಲಿ ಇಡಲಾಗಿತ್ತು. ಅಲ್ಲದೇ ಜಾನುವಾರುಗಳ ರಕ್ಷಣೆಗೆಂದು ಕ್ಯಾಟಲ್ ಕೇಂದ್ರಗಳನ್ನೂ ಕೂಡ ತೆರೆಯಲಾಗಿತ್ತು. ಈ ಬಾರಿಯೂ ಕೂಡ ಕ್ಯಾಟಲ್ ಕೇಂದ್ರಗಳನ್ನ ತೆರೆಯಲು ಸ್ಥಳಗಳನ್ನ ತೆರೆಯಲಾಗಿದೆ ಎಂದರು.
ಜಿಲ್ಲೆಯ ಸಿರುಗುಪ್ಪ ಹಾಗೂ ಹಡಗಲಿ ಭಾಗದಲ್ಲಿ ಬೋಟ್ಗಳ ವ್ಯವಸ್ಥೆ ಮಾಡಲಾಗಿದೆ. ನದಿ ಪಾತ್ರದಲ್ಲಿ ವಾಸಿಸುತ್ತಿರುವ ಜನಗಳನ್ನ ಸ್ಥಳಾಂತರಿಸಲು ಕ್ರಮ ವಹಿಸಲಾಗಿದೆ. ಅಲ್ಲದೇ, ಕೋವಿಡ್ ಸೋಂಕಿತರು ಕಂಡು ಬಂದರೆ ಕಾಳಜಿ ಕೇಂದ್ರಗಳಲ್ಲಿ ಪ್ರತ್ಯೇಕ ಕೋವಿಡ್ ಕೇರ್ ಕೊಠಡಿಗಳನ್ನ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.