ಬಳ್ಳಾರಿ: ಜಿಂದಾಲ್ ಕಂಪನಿಯಲ್ಲಿನ (ಜೆಎಸ್ ಡಬ್ಲ್ಯು) 10ನೇ ಎಂ.ಟಿ. ಗೇಟ್ ಕೋಕ್ ಪ್ಲಾಂಟ್ ಒಳಗಡೆ ಡಂಪಿಂಗ್ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದುರ್ಗಣ್ಣ ನಿಗೂಢ ಸಾವಿನ ಪ್ರಕರಣವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆ (ಯುವಶಕ್ತಿ) ರಾಜ್ಯ ಹಾಗೂ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಯ ಆವರಣದಲ್ಲಿಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಆರ್.ವಿಜಯಕುಮಾರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಕೆಲಕಾಲ ಘೋಷಣೆ ಕೂಗಿದರು. ಬಳಿಕ ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥ ಅವರಿಗೆ ಮನವಿಪತ್ರ ಸಲ್ಲಿಸಿದರು.
ದುರ್ಗಣ್ಣ ಅವರ ಸಾವಿನ ಕುರಿತಾಗಿ ಇಂದಿನವರೆಗೂ ಜಿಂದಾಲ್ ಕಂಪನಿಯ ಆಡಳಿತ ಮಂಡಳಿ ಯಾವುದೇ ಮಾಹಿತಿ ನೀಡಲು ಮುಂದಾಗಿಲ್ಲ. ಇದರಿಂದ ಸಂಶಯಗಳು ಹೆಚ್ಚಾಗುತ್ತಿವೆ. ದುರ್ಗಣ್ಣ ಅವರ ಸಾವು ಬಹಳ ನಿಗೂಢತೆಯಿಂದ ಕೂಡಿದ್ದು, ಜಿಲ್ಲಾಡಳಿತ ಮಧ್ಯೆಪ್ರವೇಶಿಸಿ ಕಾರ್ಮಿಕ ದುರ್ಗಣ್ಣ ಅವರ ಸಾವಿನ ಕುರಿತು ಸೂಕ್ತ ತನಿಖೆ ನಡೆಸಬೇಕು ಹಾಗೂ ಅವಲಂಬಿತರಿಗೆ ಅಗತ್ಯ ಪರಿಹಾರಧನವನ್ನು ವಿತರಿಸಬೇಕು ಎಂದು ಆಗ್ರಹಿಸಿದರು.