ಬಳ್ಳಾರಿ: ಜಿಲ್ಲೆಯ ಹೊಸಪೇಟೆ ನಗರದ ಮುಖ್ಯರಸ್ತೆ ಹಾಗೂ ಉಪರಸ್ತೆಗಳ ಒಳಚರಂಡಿ (ಯುಜಿಡಿ) ಓವರ್ ಪ್ಲೋ ಆಗಲು ಸ್ಯಾನಿಟರಿ ನ್ಯಾಪ್ಕಿನ್, ನಿರುಪಯುಕ್ತ ಬಟ್ಟೆಗಳನ್ನು ಶೌಚಗೃಹ ಮತ್ತು ಸ್ನಾನಗೃಹದ ಪೈಪ್ ಮೂಲಕ ಬಿಸಾಡುವುದೇ ಬಹುಮುಖ್ಯ ಕಾರಣವಾಗಿದೆ. ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ಹೊಸಪೇಟೆ ನಗರಸಭೆ ಪೌರಾಯುಕ್ತೆ ಜಯಲಕ್ಷ್ಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ಮುಂದೆ ಮುಖ್ಯರಸ್ತೆ ಹಾಗೂ ಉಪರಸ್ತೆಗಳಲ್ಲಿನ ಯುಜಿಡಿ ಪಾಯಿಂಟ್ಗಳು ಓವರ್ ಫ್ಲೋ ಆಗಿದ್ದು ಕಂಡುಬಂದರೆ ಯಾವ ಮನೆಯಿಂದ ಈ ನಿರುಪಯುಕ್ತ ಬಟ್ಟೆ ಹಾಗೂ ಸ್ಯಾನಿಟರಿ ನ್ಯಾಪ್ಕಿನ್ಗಳು ಬಂದಿವೆ ಎಂಬುದನ್ನು ಪತ್ತೆಹಚ್ಚಿ ಅದನ್ನು ವಿಡಿಯೋ ಮಾಡಿ ಅಂಥಹ ಮನೆಗಳ ಮಾಲೀಕರ ವಿರುದ್ಧ ಕಾನೂನು ರಿತ್ಯಾ ಕ್ರಮ ಜರುಗಿಸಲಾಗುವುದು ಎಂದರು.
ಇದಲ್ಲದೆ ಅಂತಹ ಮನೆ ಮಾಲೀಕರಿಂದ ನಿಗದಿತ ದಂಡ ಶುಲ್ಕ ವಸೂಲಿ ಮಾಡಲಾಗುವುದೆಂದು ಎಚ್ಚರಿಕೆ ನೀಡಿದ್ದಾರೆ. ಹೊಸಪೇಟೆ ನಗರದ ನೆಹರು ಕಾಲೊನಿ, ಎಂ.ಜಿ. ನಗರ, ಜೆಪಿ ನಗರ, ಕೌಲ್ ಪೇಟೆ, ಚಿತ್ತವಾಡ್ಗಿ, ವಿಜಯನಗರ ಕಾಲೇಜಿನ ಬಾಲಕಿಯರ ವಸತಿ ನಿಲಯ ಭಾಗದಲ್ಲಿಯೇ ಇಂತಹ ಘಟನೆಗಳು ಹೆಚ್ಚಾಗಿವೆ ಎಂದು ಎಚ್ಚರಿಸಿದ್ದಾರೆ.
ಯುಜಿಡಿ ಪಾಯಿಂಟ್ ಓವರ್ ಫ್ಲೋನಿಂದಾಗಿ ಹೊಸಪೇಟೆ ನಗರದ ಪರಿಸರ ಹಾಳಾಗುತ್ತಿದೆ. ಇದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ. ಇದು ನನ್ನ ಕೊನೆಯ ಮನವಿಯಾಗಿದೆ. ಸಾರ್ವಜನಿಕರು ಹೊಸಪೇಟೆ ನಗರಸಭೆಯೊಂದಿಗೆ ಸಹಕರಿಸಬೇಕೆಂದು ಪೌರಾಯುಕ್ತೆ ಜಯಲಕ್ಷ್ಮಿ ಕೋರಿದ್ದಾರೆ.