ಬಳ್ಳಾರಿ: ಬೆಂಗಳೂರಿನ ಬೆನಗಾನಹಳ್ಳಿ ಗ್ರಾಮದಲ್ಲಿ 4.20 ಎಕರೆ ಡಿನೋಟಿ ಫೈ ಪ್ರಕರಣದ ವಿಚಾರಣೆಯಿದ್ದು, ಸಚಿವ ಡಿ.ಕೆ.ಶಿವಕುಮಾರಗೆ ಜೈಲು ಶಿಕ್ಷೆಯಾಗುವ ಕೊನೆಯ ಅವಕಾಶ ಇದೇ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ ಭವಿಷ್ಯ ನುಡಿದಿದ್ದಾರೆ.
ಬಳ್ಳಾರಿಯ ಮಯೂರ ಹೊಟೇಲ್ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಬೆನಗಾನಹಳ್ಳಿ ಗ್ರಾಮದ ಭೂಮಿಯನ್ನು ಡಿನೋಟಿಫಿಕೇಷನ್ ಮೂಲಕ ಅಂದಿನ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ , ಹಾಲಿ ಸಚಿವ ಡಿ.ಕೆ.ಶಿವಕುಮಾರ ಹೆಸರಿನಡಿ ರಿಜಿಸ್ಟರ್ ಮಾಡುತ್ತಾರೆ. ಆ ಪ್ರಕರಣವು ಈ ದಿನ ಸುಪ್ರೀಂಕೋರ್ಟ್ ಎದುರು ವಿಚಾರಣೆಗೆ ಬರಲಿದೆ, ಇದು ಸಚಿವರನ್ನು ಜೈಲಿಗೆ ಕಳಿಸುವ ಕೊನೆಯ ಅವಕಾಶ ಎಂದಿದ್ದಾರೆ. ಸುಪ್ರೀಂಕೋರ್ಟಿನಲ್ಲಿ ಡಿನೋಟಿಫಿಕೇಷನ್ ಅಕ್ರಮದ ವಿಚಾರಣೆಯನ್ನು ನ್ಯಾಯಾಧೀಶರು ಕೈಗೆತ್ತಿಕೊಳ್ಳಲಿದ್ದಾರೆ. ಹಿರಿಯ ವಕೀಲ ಪ್ರಶಾಂತ ಭೂಷಣ್ ಅವರು ಪ್ರಕರಣದ ವಾದ ಮಂಡಿಸಲಿದ್ದಾರೆ ಎಂದರು.
ಕಡುಭ್ರಷ್ಟ ಡಿಕೆಶಿ, ಬಿಎಸ್ ವೈ ಜೈಲಿಗೆ:
ನನ್ನ ಜೀವನದ ಕೊನೆ ಉಸಿರಿರೋವರೆಗೂ ಈ ಕಡುಭ್ರಷ್ಟರಾದ ಹಾಲಿ ಸಚಿವ ಡಿಕೆಶಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಜೈಲಿಗೆ ಕಳಿಸೋದನ್ನು ಬಿಡಲ್ಲ. ಇದರೊಂದಿಗೆ ಜಿಂದಾಲ್ ಸಮೂಹ ಸಂಸ್ಥೆಯ ಮಾಲೀಕ ಸಜ್ಜನ್ ಜಿಂದಾಲ್ ಅವರೂ ಕೂಡ ಸೇರಿಕೊಂಡಿದ್ದಾರೆ. ಕೈಗಾರಿಕಾ ಉದ್ದಿಮೆಗಳಲ್ಲಿ ಸಜ್ಜನ್ ಜಿಂದಾಲ್ ಮಹಾನ್ ಕಳ್ಳ. ಅವರು ಸರ್ವಾಧಿಕಾರಿ ಧೋರಣೆಯನ್ನು ಹೊಂದಿದ್ದಾರೆ. ಗಣಿ ಅಕ್ರಮದಲ್ಲಿ ತೊಡಗಿದ್ದ ಗಾಲಿ ಜನಾರ್ದನರೆಡ್ಡಿಗೆ ಆದ ಗತಿಯೇ, ಈ ಜಿಂದಾಲ್ ಸಮೂಹ ಸಂಸ್ಥೆಯ ಮಾಲೀಕ ಸಜ್ಜನ್ ಜಿಂದಾಲ್ ಅವರಿಗೆ ಆಗಲಿದೆ ಎಂದು ಭವಿಷ್ಯ ನುಡಿದರು.