ಗಣಿನಾಡೆಂಬ ಕುಖ್ಯಾತಿ ಜತೆ ಬಳ್ಳಾರಿ ಸ್ವಾತಂತ್ರ್ಯ ಹೋರಾಟದಲ್ಲೂ ಸಾಕಷ್ಟು ಗಮನ ಸೆಳೆಯುತ್ತೆ. ಆಜಾದಿ ಆಂದೋಲನದಲ್ಲಿ ಇದೇ ಮಣ್ಣಿನಲ್ಲಿ ನಿರ್ಮಾಣವಾದ ಈ ಮೂರು ಜೈಲುಗಳೇ ಅದಕ್ಕೆ ಸಾಕ್ಷಿ ಎಂಬತಿವೆ.
ಅದು, 1874ನೇ ಇಸವಿ . ಸ್ವಾತಂತ್ರ್ಯ ಸಂಗ್ರಾಮ ಹೋರಾಟದಲ್ಲಿ ಧುಮುಕ್ಕಿದ್ದ ಇಡೀ ದೇಶದ ಅಗ್ರಗಣ್ಯ ಹೋರಾಟಗಾರರನ್ನ ಹಿಡಿದಿಟ್ಟುಕೊಳ್ಳೋದೇ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ದೊಡ್ಡ ತಲೆ ಬಿಸಿಯಾಗಿತ್ತು. ಆಗಿನ ಮದ್ರಾಸ್ ಪ್ರಾಂತ್ಯದ ನಾಲ್ಕು ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರನ್ನ ಸೆರೆಯಾಗಿಸುತ್ತಿದ್ದದ್ದು ಇದೇ ಬಳ್ಳಾರಿಯ ಮೂರು ಜೈಲುಗಳಲ್ಲೇ.
ಸ್ವಾತಂತ್ರ್ಯ ಸಂಗ್ರಾಮದ ವೇಳೆ ಕ್ಷಯರೋಗದ ಭೀತಿ ಎದುರಾಗಿತ್ತು. ಅದನ್ನ ನಿಯಂತ್ರಿಸುವ ಸಲುವಾಗಿಯೇ ಬಳ್ಳಾರಿಯ ಟಿಬಿ ಸ್ಯಾನಿಟೋರಿಯಂ ಪ್ರದೇಶದಲ್ಲಿ ಪ್ರತ್ಯೇಕ 'ವೆಲ್ಲೆಸ್ಲಿ' ಜೈಲ್‌ನ ಕಟ್ಟಡವನ್ನ ಅಂದಿನ ಬ್ರಿಟಿಷ್ ಸರ್ಕಾರ ಪ್ರಾರಂಭಿಸಿತ್ತು. ಕ್ಷಯರೋಗಕ್ಕೆ ತುತ್ತಾದ ಸ್ವಾತಂತ್ರ್ಯ ಹೋರಾಟಗಾರರನ್ನ ಬಂಧಿಸಿ, ಅಗತ್ಯ ಚಿಕಿತ್ಸೆ ಕೊಡಿಸಲಾಗಿತ್ತು.
ಹೋರಾಟಗಾರರಿಗೆ ಕಠಿಣ ಸೆರೆವಾಸ
1874ರಲ್ಲಿ ಮೊದಲಿಗೆ ಸೆಂಟ್ರಲ್ ಜೈಲ್‌ನ ಆರಂಭಿಸಲಾಯಿತು. ಆ ಬಳಿಕ, ಅಲ್ಲೀಪುರದ ಕಂಟೋನ್ಮೆಂಟ್ ಪ್ರದೇಶದಲ್ಲೊಂದು ಜೈಲು, ಕ್ಷಯ ರೋಗಿಗಳಿಗೋಸ್ಕರನೇ ಟಿಬಿ ಸ್ಯಾನಿಟೋರಿಯಂ ಪ್ರದೇಶದಲ್ಲಿ ಮತ್ತೊಂದು ಜೈಲ್‌ನ ಆರಂಭಿ ಸಲಾಗಿತ್ತು. ಮದ್ರಾಸ್ ಪ್ರಾಂತ್ಯದ ಕಡಪ, ಕರ್ನೂಲ್, ಅನಂತಪುರ ಹಾಗೂ ಬಳ್ಳಾರಿ ಜಿಲ್ಲೆಗಳ ಸ್ವಾತಂತ್ರ್ಯ ಹೋರಾಟಗಾರರನ್ನ ಈ ಮೂರು ಜೈಲುಗಳಲ್ಲಿ ಸೆರೆ ಹಿಡಿಯಲಾಗಿತ್ತು ಎಂದು ಇತಿಹಾಸ ಸಾರುತ್ತೆ.
ಗಡಿನಾಡಿಗೆ ಬಂದಿದ್ದರು ರಾಷ್ಟ್ರಪಿತ
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಬಳ್ಳಾರಿ ಜಿಲ್ಲೆಗೆ ಭೇಟಿ ನೀಡಿ, ಅಂದಾಜು ನಾಲ್ಕು ಗಂಟೆ ಕಾಲ ಇಲ್ಲಿನ ರೈಲು ನಿಲ್ದಾಣದಲ್ಲಿ ತಂಗಿದ್ದರು. ಜಿಲ್ಲೆಯ ಸಂಡೂರು ತಾಲೂಕಿನ ಕುಮಾರಸ್ವಾಮಿ ಆಲಯಕ್ಕೆ ದಲಿತರ ಪ್ರವೇಶಕ್ಕೆ ಅನುವು ಮಾಡಿಕೊಟ್ಟ ರಾಜಮಹಾರಾಜರ ಕಾರ್ಯಕ್ಕೆ ಗಾಂಧೀಜಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಲ್ಲಿಂದ ನೇರವಾಗಿ ಕೂಡ್ಲಿಗಿ ತಾಲೂಕಿಗೆ ಭೇಟಿ ನೀಡಿದ್ದರು ಎಂಬುದನ್ನ ಅಲ್ಲಿನ ಗಾಂಧೀಜಿ ಚಿತಾಭಸ್ಮ ಹೇಳುತ್ತದೆ. ಗಣಿ ಜಿಲ್ಲೆಯ ಬೇರೆ ಬೇರೆ ತಾಲೂಕಿನ ಜನರೂ ಸಹ ಈ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದರು. ಅವರೂ ಕೂಡ ಈ ಮೂರು ಜೈಲುಗಳಲ್ಲಿ ಸೆರೆಮನೆ ವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಜಿಲ್ಲೆಯ ಕೊಡುಗೆ ಕುರಿತ ಇತಿಹಾಸಕಾರರು ಈ ರೀತಿ ಸ್ಮರಿಸುತ್ತಿದ್ದಾರೆ.
ಸ್ವಾತಂತ್ರ್ಯಕ್ಕಾಗಿ ಬೀದಿಗಿಳಿದ ನೂರಾರು ಹೋರಾಟಗಾರರು
ಇಲ್ಲಿನ ಜೈಲುಗಳು ಮಾಪಳ ದಂಗೆಕೋರರ ನೆಲೆಯಾಗಿತ್ತು. ದಕ್ಷಿಣ ಭಾರತದ ಅಗ್ರಗಣ್ಯರ ಸ್ಥಳವಾಗಿ ಬಳ್ಳಾರಿ ಜೈಲುಗಳು ಮಾರ್ಪಟ್ಟಿರುವುದು ಬಹುಮುಖ್ಯವಾಗಿದೆ. ಬಳ್ಳಾರಿಯ ಬಿಂದು ಮಾಧವ, ಠೇಕೂರ ಸುಬ್ರಮಣ್ಯಂ, ಬಜಾರ್ ವೆಂಕಟ ರಮಣಾಚಾರ್ಯ, ಬಾದನಹಟ್ಟಿ ವೆಂಕೋಬರಾವ್, ಮತ್ತಿಹಳ್ಳಿ ರಾಘವೇಂದ್ರ ರಾವ್, ವಡ್ಡಿ ವೆಂಕೋಬರಾವ್, ಡಿ ಹೆಚ್ ಕೃಷ್ಣರಾವ್ ಅವರು ಈ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ಠೇಕೂರ್ ರಾಮನಾಥ್ ಅವರ ಮನೆಯಂತೂ ಆಗಿನ ಕಾಲದ ಔಟ್‌ಪೋಸ್ಟ್ ಪೊಲೀಸ್ ಠಾಣೆಯಾಗಿತ್ತು. ಈ ಜಿಲ್ಲೆಯು ಆಗ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಈಗೀನ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ, ಹರಪನಹಳ್ಳಿ ಹಾಗೂ ಈ ಜಿಲ್ಲೆಯ ಬಳ್ಳಾರಿ- ಸಿರುಗುಪ್ಪ ತಾಲೂಕಿನವರು ಸ್ವಾತಂತ್ರ್ಯ ಸಂಗ್ರಾಮದ ಹೋರಾಟದಲ್ಲಿ ಸಕ್ರಿಯರಾಗಿದ್ದರು.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಈಜಾರಿ ಶಿರಸಪ್ಪನವರು, ಮುದೇನೂರು ಸಂಗಣ್ಣನವರು, ಹಡಗಲಿಯ ಮಾಮಾ ಪಾಟೀಲ, ಬಳ್ಳಾರಿಯ ಯಜಮಾನ ಶಾಂತರುದ್ರಪ್ಪ, ಬುರ್ಲಿ ಮಾಧವರಾವ್, ಬಿಂದುರಾವ್, ಪಿ ಬಿ ಕೇಶವರಾವ್, ಕೊಟ್ಟೂರಿನ ಗುರ್ಲಿ ಶರಣಪ್ಪ, ಕೂಡ್ಲಿಗಿಯ ತೂಲದಹಳ್ಳಿಯ ಬಸಪ್ಪ, ಬಾಚಿಗೊಂಡನ ಹಳ್ಳಿಯ ಚನ್ನಬಸವಗೌಡರು, ಸೊನ್ನದ ಈಶ್ವಪ್ಪ, ಹಂಪಾಪಟ್ಟಣದ ಈಶಪ್ಪ, ಹಗರಿಬೊಮ್ಮನಹಳ್ಳಿ ಬಾರಿಕರ ಯಲ್ಲಪ್ಪ, ಆಲ್ದಾಳ್ ಹಾಲಪ್ಪನವ್ರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪಾಲ್ಗೊಂಡಿರೋದನ್ನ ಸ್ಮರಿಸಬಹುದು.