ಬಳ್ಳಾರಿ: ಹಾಲಿ ಶಾಸಕರಾದ ಕರುಣಾಕರ ರೆಡ್ಡಿ, ಸೋಮಶೇಖರ ರೆಡ್ಡಿ ನೆರೆಯ ಆಂಧ್ರ ಪ್ರದೇಶ ಮೂಲದವರು, ಅವರಿಗೇನು ಗೊತ್ತು ಎಂಬ ಸಾಹಿತಿ ಕುಂ.ವೀರಭದ್ರಪ್ಪನವರ ಹೇಳಿಕೆಗೆ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ, ಅಂತಹ ಸಾಹಿತಿ ಹೇಳಿದ್ದಕ್ಕೆಲ್ಲಾ ಉತ್ತರ ಕೊಡಲಿಕ್ಕೆ ಆಗಲ್ಲ ಎಂದಿದ್ದಾರೆ.
ಜಿಲ್ಲೆಯ ಹರಪನಹಳ್ಳಿಯಲ್ಲಿಂದು ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆ ಕುರಿತು ಹಾಲಿ ಶಾಸಕರಾದ ಸೋಮಶೇಖರ ರೆಡ್ಡಿ, ಗಾಲಿ ಕರುಣಾಕರ ರೆಡ್ಡಿ, ಸಚಿವ ಶ್ರೀರಾಮುಲು ವಿರೋಧ ವ್ಯಕ್ತಪಡಿಸಿದ್ರು. ಇದಕ್ಕೆ ಸಾಹಿತಿ ಕುಂ.ವೀರಭದ್ರಪ್ಪನವ್ರು ನಿಮ್ಮನ್ನ ಆಂಧ್ರ ಪ್ರದೇಶ ರೆಡ್ಡಿಗಳೆಂದು ದೂರಿದ್ದಾರಲ್ಲ ಎಂಬ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರೆಡ್ಡಿ, ಅವರಿಗೆಲ್ಲ ಉತ್ತರ ಕೊಡೋಕೆ ಆಗಲ್ಲ ಎಂದಿದ್ದಾರೆ.
ನಮ್ಮ ತಂದೆಯವರಯ ಇಲ್ಲೇ 35 ವರ್ಷ ಕೆಲಸ ಮಾಡಿದ್ದಾರೆ. ನಾನು ಹುಟ್ಟಿದ್ದು ಇಲ್ಲೇ. ಬೇಕಾದ್ರೆ ನನ್ನ ಜನನ ಪ್ರಮಾಣ ತೋರಿಸ್ಲಾ. ಅಂತಹ ಸಾಹಿತಿ ಹೇಳಿಕೆಗೆ ನಾನೇನು ಪ್ರತಿಕ್ರಿಯಿಸಲ್ಲ ಎಂದು ಕರುಣಾಕರ ರೆಡ್ಡಿ ಕಿಡಿಕಾರಿದ್ದಾರೆ.
ಬಳ್ಳಾರಿ ವಿಭಜನೆಯನ್ನು ವಿರೋಧಿಸುತ್ತಿರುವ ರೆಡ್ಡಿ ಸಹೋದರರು ಆಂಧ್ರದವರು. ಈ ಜಿಲ್ಲೆಯ ವಿಭಜನೆಯಿಂದ ಶ್ರೀಸಾಮಾನ್ಯರಿಗೆ ಆಗುವ ಪ್ರಯೋಜನವೇನೆಂದು ಅವರಿಗೆ ಅರಿವಾಗುತ್ತಿಲ್ಲ. ಅಧಿಕಾರ ವಿಕೇಂದ್ರೀಕರಣಕ್ಕಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಚಿಕ್ಕ ಜಿಲ್ಲೆಗಳನ್ನು ಮಾಡಲಾಗುತ್ತಿದೆ. ಅಂತೆಯೇ ವಿಶಾಲವಾದ ಬಳ್ಳಾರಿಯನ್ನು ವಿಭಜಿಸುವುದರಲ್ಲಿ ತಪ್ಪಿಲ್ಲ ಎಂದು ಕುಂ.ವಿ.ಹೇಳಿದ್ದರು. ನಾವು ಬಳ್ಳಾರಿಯಲ್ಲೇ ಇದ್ದೆವು ಅನ್ನೊದಕ್ಕೆ ಬರ್ತ್ ಸರ್ಟಿಫಿಕೇಟ್ ಕೊಡಲಾ? ನಮ್ಮ ತಂದೆ 35 ವರ್ಷ ಇಲ್ಲೇ ಪೊಲೀಸರಾಗಿ ಕೆಲಸ ಮಾಡಿದ ಸರ್ಟಿಫಿಕೇಟ್ ಕೊಡ್ಲಾ ಎಂದು ರೆಡ್ಡಿ ಗರಂ ಆದ್ರು.