ಬಳ್ಳಾರಿ: ರಾಜ್ಯ ಸರ್ಕಾರಿ ನೌಕರರ ವೇತನ ಪಾವತಿ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯ ಸರ್ಕಾರ ಗಾಳಿಗೆ ತೂರಿದೆ ಎಂದು ಮುಸ್ಲಿಂ ಎಂಪ್ಲಾಯೀಸ್ ಫೆಡರೇಷನ್ ರಾಜ್ಯ ಘಟಕದ ಅಧ್ಯಕ್ಷ ರಿಜ್ವಾನ್ ಎನ್.ಖಾನ್ ದೂರಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಅವರು, ತಿಂಗಳಾಂತ್ಯಕ್ಕೆ ಸರ್ಕಾರಿ ನೌಕರರ ವೇತನ ಪಾವತಿಸಬೇಕೆಂಬ ಆದೇಶವನ್ನು ಸುಪ್ರೀಂಕೋರ್ಟ್ ಹೊರಡಿಸಿದೆ. ಆದ್ರೆ ಅದಕ್ಕೆ ವ್ಯತಿರಿಕ್ತವಾದ ವಾತಾವರಣವಿಲ್ಲಿ ನಿರ್ಮಾಣವಾಗಿದೆ. ಹೀಗಾಗಿ, ರಾಜ್ಯ ಸರ್ಕಾರ ಘನ ಸುಪ್ರೀಂಕೋರ್ಟ್ನ ಆದೇಶವನ್ನು ಗಾಳಿಗೆ ತೂರಿದ್ದಲ್ಲದೇ, ಅದಕ್ಕೆ ಕಿಮ್ಮತ್ತೇ ನೀಡುತ್ತಿಲ್ಲ ಎಂದು ಆರೋಪಿಸಿದ್ರು.
ಕಳೆದ ನಾಲ್ಕಾರು ತಿಂಗಳ ಕಾಲ ನಾನಾ ಇಲಾಖೆಗಳ ಸರ್ಕಾರಿ ನೌಕರರಿಗೆ ಸಂಬಳವೇ ಪಾವತಿಯಾಗಿಲ್ಲ. ಮೊನ್ನೆ ತಾನೇ ಹಿಂದೆ ಬಾಕಿ ಉಳಿಸಿಕೊಂಡಿದ್ದ ಎರಡು ತಿಂಗಳ ವೇತನವನ್ನು ಪಾವತಿಸಿದ್ದಾರೆ. ಇನ್ನೂ ಮೂರು ತಿಂಗಳ ವೇತನ ಬಾಕಿ ಇದೆ. ಸರ್ಕಾರಿ ನೌಕರರೆಲ್ಲರೂ ಸಾಲದ ಸುಳಿಯಲ್ಲಿ ಸಿಲುಕಿಕೊಂಡು ಸಕಾಲದಲ್ಲಿ ಸಾಲ ಮರು ಪಾವತಿಸಲಾಗದೇ ಒದ್ದಾಡುತ್ತಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಆದೇಶದನ್ವಯ ಸರ್ಕಾರಿ ನೌಕರರಿಗೆ ವೇತನ ಪಾವತಿಸಬೇಕೆಂದು ಆಗ್ರಹಿಸಿದ್ರು.