ಬಳ್ಳಾರಿ : ಜಿಲ್ಲೆಯ ಕೊಟ್ಟೂರು ತಾಲೂಕಿನ ಪಟ್ಟಣದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರಿಗೆ ಕೋವಿಡ್-19 ದೃಢಪಟ್ಟ ಹಿನ್ನೆಲೆ ಪಟ್ಟಣದ ಪೊಲೀಸ್ ವಸತಿ ಗೃಹ ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಎಂದು ಜಿಲ್ಲಾಧಿಕಾರಿ ಘೊಷಿಸಿದ್ದು, ಮನೆಯಿಂದ ವಿನಾ ಕಾರಣ ಹೊರ ಬರುವ ವ್ಯಕ್ತಿಗಳ ವಿರುದ್ಧ ಎಫ್.ಐ.ಆರ್ ದಾಖಲಿಸಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಹರಪನಹಳ್ಳಿ ಉಪ ವಿಭಾಗಾಧಿಕಾರಿ ವಿ.ಕೆ ಪ್ರಸನ್ನ ಕುಮಾರ್ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಟೇನ್ಮೆಂಟ್ ಝೋನ್ ಆಗಿರುವ ಪೊಲೀಸ್ ಕ್ವಾಟ್ರಸ್‌ಗೆ ಭೇಟಿ ನೀಡಿ, ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದಿಕೊಂಡಿದ್ದು, ಈಗಾಗಲೇ ಆ ಏರಿಯಾವನ್ನು ಸೀಲ್‌ಡೌನ್ ಮಾಡಲಾಗಿದೆ ಎಂದರು.
ಸ್ಥಳೀಯ ಜನರಿಗೆ 28 ದಿನಗಳ ವರೆಗೆ ಬೆಳಗ್ಗೆ 7 ರಿಂದ 9 ಗಂಟೆ ಒಳಗಡೆ ಮಾತ್ರ ದಿನಸಿ ಖರೀದಿಸಲು ಅವಕಾಶ ನೀಡಿದ್ದೇವೆ, ಸುತ್ತಮುತ್ತಲಿನ 270 ಮನೆಗಳ ಜನರನ್ನು ಹೋಮ್ ಕ್ವಾರಂಟೈನ್ ಮಾಡಿದ್ದು, ಅವರಿಗೆ ಅಗತ್ಯ ವಸ್ತುಗಳನ್ನು ಸ್ಥಳೀಯ ಆಡಳಿತದಿಂದ ಪೂರೈಕೆ ಮಾಡಲಾಗುವುದು, ನಿವಾಸಿಗಳ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಲ್ಲಿ ಒಂದು ಮೆಡಿಕಲ್ ಶಾಪ್ ಜೊತೆಗೆ ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜಿಸಲಾಗುವುದು ಎಂದರು.
ಯಾವುದೇ ಕಾರಣಕ್ಕೂ ಈ ವಲಯದ ಜನರು ಹೊರ ಬಾರದಂತೆ ನೋಡಿಕೊಳ್ಳುವುದಕ್ಕಾಗಿ ಗುಡೆಕೋಟೆ ಮತ್ತು ಕಾನಹೊಸಹಳ್ಳಿಯ 40 ಜನ ಪೊಲೀಸ್ ಸಿಬ್ಬಂದಿ ನೇಮಿಸಲಾಗಿದೆ. ಅಧಿಕಾರಿಗಳಿಗೆ ಸ್ಥಳೀಯ ನಿವಾಸಿಗಳು ಸಹಕರಿಸಬೇಕು ಎಂದರು.
ನಂತರ ತಹಶೀಲ್ದಾರ್ ಜಿ. ಅನಿಲ್‌ಕುಮಾರ್ ಮಾತನಾಡಿ, ಕೊಟ್ಟೂರು ಪಟ್ಟಣದ ಜನರಲ್ಲಿ ಮತ್ತು ಆರೋಗ್ಯ ಸಿಬ್ಬಂದಿಯಲ್ಲಿ ಕೊರೊನಾಗೆ ಸಂಬಂಧಿಸಿದ ಲಕ್ಷಣಗಳು ಕಂಡು ಬಂದರೆ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಆರಂಭಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಫ್.ಹೆಚ್.ಬಿದಿರಿ, ಕಂದಾಯ ಅಧಿಕಾರಿ ಹಾಲಸ್ವಾಮಿ, ಗ್ರಾಮ ಲೆಕ್ಕಾಧಿಕಾರಿ ಮಲ್ಲೇಶ್ ಉಪಸ್ಥಿತರಿದ್ದರು.