ಬಳ್ಳಾರಿ: ಗಣಿನಾಡು ಬಳ್ಳಾರಿ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯು ಇಡೀ ರಾಜ್ಯದ ವಿಶೇಷ ಗಮನ ಸೆಳೆದಿದೆ. ಸರಿ ಸುಮಾರು ಆರು ಮಂದಿ ವೈದ್ಯರ ತಂಡದೊಂದಿಗೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಬರೋಬ್ಬರಿ ನೂರು ಮಂದಿ ಗರ್ಭೀಣಿ ಮಹಿಳೆಯರಿಗೆ ಹೆರಿಗೆ ಮಾಡುವ ಮುಖೇನ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು, ಮೊದಲಿಯಾರ್ ಸ್ಮರಣಾರ್ಥ ಈ ಹಿಂದೆ ಗರ್ಭಿಣಿಯರ ಹೆರಿಗೆ ಶಸ್ತ್ರಚಿಕಿತ್ಸೆಗೋಸ್ಕರಕ್ಕಾಗಿಯೇ ಇದನ್ನು ಜಿಲ್ಲಾಸ್ಪತ್ರೆಯನ್ನಾಗಿ ಮಾಡಲಾಗಿತ್ತು. ಪ್ರತಿ ತಿಂಗಳು ಅಂದಾಜು 500-600 ಕ್ಕೂ ಅಧಿಕ ಹೆರಿಗೆ ಶಸ್ತ್ರಚಿಕಿತ್ಸೆ ಮಾಡೋ ಮುಖೇನ ಅತ್ಯುತ್ತಮ ಹೆರಿಗೆ ಆಸ್ಪತ್ರೆಯೆಂದೇ ಖ್ಯಾತಿಗಳಿಸಿತ್ತು. ಯಾವಾಗ ಜಿಲ್ಲಾ ಕೋವಿಡ್ ಆಸ್ಪತ್ರೆ ಎಂದು ಘೋಷಣೆಯಾದ ಬಳಿಕ ಕಳೆದ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 100ಕ್ಕೂ ಅಧಿಕ ಗರ್ಭೀಣಿಯರ ಹೆರಿಗೆ ಶಸ್ತ್ರಚಿಕಿತ್ಸೆಯನ್ನ ಅತ್ಯಂತ ಯಶಸ್ವಿಯಾಗಿ ಮಾಡೋ ಮುಖೇನ ದಾಖಲೆ ಬರೆದಿದೆ.
ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿಯವ್ರ ಮಾರ್ಗದರ್ಶನದಲ್ಲಿ ಸರಿ ಸುಮಾರು ಆರು ಮಂದಿ ವೈದ್ಯರ ತಂಡವು ಪ್ರತಿ ದಿನಕ್ಕೆ ಇಬ್ಬರಂತೆ ಕೋವಿಡ್ ಸೋಂಕಿಗೆ ಒಳಗಾಗಿದ್ದ ಗರ್ಭೀಣಿಯರ ಹೆರಿಗೆ ಕಸೂತಿ ಮಾಡಿರೋದು ಕೂಡ ನಿಜಕ್ಕೂ ಶ್ಲಾಘನಾರ್ಹ.
ಪ್ರಸವ ಮತ್ತು ಸ್ತ್ರೀರೋಗ (ಒಬಿಜೆ) ವಿಭಾಗದ ವೈದ್ಯರಾದ ಡಾ.ಸುಯಜ್ಞ ಜೋಷಿ, ಡಾ.ಖಾಜಿ, ಡಾ.ವಿಜಯಲಕ್ಷ್ಮೀ, ಡಾ. ಜಯಪ್ರದಾ, ಡಾ.ಶಾರದಾ, ಡಾ.ವೀಣಾ, ಡಾ.ಅಶ್ರಫ್, ಡಾ.ಸ್ವಾತಿ, ಡಾ.ಪೂರ್ಣಿಮಾ, ಡಾ.ಸರಸ್ವತಿ, ಡಾ.ಲಾವಣ್ಯ, ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ.ಕಾವ್ಯ, ಡಾ.ರುಕ್ಸಾ, ಡಾ.ರಾಜೇಶ್ವರಿ ಸೇರಿದಂತೆ ಸ್ಟಾಫ್ ನರ್ಸ್, ಅರವಳಿಕೆ ತಜ್ಞರ ತಂಡವು ಈ ಕೋವಿಡ್ ಒಳಗಾಗಿದ್ದ ಗರ್ಭೀಣಿಯರ ಹೆರಿಗೆ ಶಸ್ತ್ರಚಿಕಿತ್ಸೆಗೆ ಸಾಥ್ ನೀಡಿದ್ದಾರೆ.
5 ಮಂದಿ ನವಜಾತ ಶಿಶುಗಳಿಗೆ ಕೋವಿಡ್ ಸೋಂಕು ಪತ್ತೆ: ಈವರೆಗೂ ಅಂದಾಜು 100 ಮಂದಿ ಗರ್ಭೀಣಿಯರಿಗೆ ಹೆರಿಗೆ ಶಸ್ತ್ರಚಿಕಿತ್ಸೆಯನ್ನ ಮಾಡಲಾಗಿದ್ದು, ಆ ಪೈಕಿ 28 ಮಂದಿ ಗರ್ಭೀಣಿಯರಿಗೆ ಸಾಮಾನ್ಯ ಹೆರಿಗೆಯನ್ನ ಮಾಡಿಸಲಾಗಿದೆ. ಉಳಿದ 78 ಮಂದಿ ಗರ್ಭೀಣಿಯರಿಗೆ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಿಸಲಾಗಿದೆ. ಕೆಲವೊಂದು ಕ್ರಿಟಿಕಲ್ ಸಂದರ್ಭವೂ ಕೂಡ ಎದುರಾದವು. ಅದನ್ನ ಯಾವುದನ್ನೂ ಲೆಕ್ಕಿಸದೇ ಕೋವಿಡ್ ಸೋಂಕಿತರಲ್ಲಿ ಹಾಗೂ ವೈದ್ಯರ ತಂಡಕ್ಕೂಕೂಡ ಮನೋಧೈರ್ಯ, ಆತ್ಮಸ್ಥೈರ್ಯವನ್ನ ತುಂಬುವ ಮೂಲಕ ಈ ಹೆರಿಗೆ ಶಸ್ತ್ರಚಿಕಿತ್ಸೆಯನ್ನ ಮಾಡಿಸಲಾಯಿತು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಈ ಟಿವಿ ಭಾರತ್ ಗೆ ತಿಳಿಸಿದ್ದಾರೆ.
ನವಜಾತ ಶಿಶುಗಳ ಪೈಕಿ ಐದು ಮಂದಿ ನವಜಾತ ಶಿಶುಗಳಿಗೆ ಈ ಕೋವಿಡ್ ಸೋಂಕಿರೋದು ಪತ್ತೆಯಾಗಿದೆ. ಅವುಗಳನ್ನ ಪ್ರತ್ಯೇಕ ಕೋವಿಡ್ ಕೇರ್ ಸೆಂಟರ್ನಲ್ಲಿರಿಸಲಾಗಿದೆ. ಆ ನವಜಾತ ಶಿಶುಗಳಿಗೆ ಹಾಲುಣಿಸುವ ಕಾರ್ಯವನ್ನ ನಮ್ಮ ಜಿಲ್ಲಾ ಕೋವಿಡ್ ಆಸ್ಪತ್ರೆ ಸಿಬ್ಬಂದಿ ಹಾಗೂ ಅವರ ಸಂಬಂಧಿಕರು ಮಾಡುತ್ತಾರೆ ಎಂದು ತಿಳಿಸಿದ್ದಾರೆ.
ಜಿಲ್ಲಾಡಳಿತ ಶ್ಲಾಘನೆ: ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿನ ನೂರು ಮಂದಿ ಕೋವಿಡ್ ಸೋಂಕಿತ ಗರ್ಭೀಣಿಯರಿಗೆ ಯಶಸ್ವಿ ಹೆರಿಗೆ ಶಸ್ತ್ರಚಿಕಿತ್ಸೆ ಮಾಡಿಸಿರೋದಕ್ಕೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎನ್.ಬಸರೆಡ್ಡಿ ಹಾಗೂ ವೈದ್ಯರ ತಂಡವನ್ನ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಬಿ.ಶ್ರೀರಾಮುಲು ಅವರೂ ಕೂಡ ಟ್ವೀಟ್ ಮಾಡೋ ಮುಖೇನ ಶ್ಲಾಘಿಸಿದ್ದಾರೆ.