ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದ ಬಸ್ ನಿಲ್ದಾಣದ ಬಳಿ ಶಾಲಾ - ಕಾಲೇಜಿನ ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಹೊಸಪೇಟೆ ತಾಲೂಕಿನ ಸೀತಾರಾಮ ತಾಂಡಾದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ನಲ್ಲಾಪುರ, ಎನ್.ಆರ್.ಕ್ಯಾಂಪ್ ಹಾಗೂ ಹೊಸ ಚಿನ್ನಾಪುರ, ಸುಗ್ಗೇನಹಳ್ಳಿ, ಮೆಟ್ರಿ ಮತ್ತು ಕಮಲಾಪುರ ಗ್ರಾಮಗಳ ನೂರಾರು ವಿದ್ಯಾರ್ಥಿಗಳು ಹೊಸಪೇಟೆಯಲ್ಲಿನ ಶಾಲಾ, ಕಾಲೇಜುಗಳಿಗೆ ಹೋಗುತ್ತಾರೆ. ಆದರೆ, ಇಷ್ಟು ಮಂದಿ ವಿದ್ಯಾರ್ಥಿಗಳು ನಗರ ಸೇರಲು ಕೇವಲ ಒಂದೇ ಒಂದು ಬಸ್ ಇದೆ. ಈ ಬಸ್ ನೊಳಗೆ ಕಾಲಿಡಲು ಕೂಡ ಜಾಗವಿಲ್ಲ ಅಷ್ಟು ತುಂಬಿರುತ್ತದೆ ಇದಲ್ಲದೇ ದಶಕದಿಂದಲೂ ಈ ಒಂದೇ ಬಸ್ ಅನ್ನು ಓಡಿಸಲಾಗುತ್ತದೆ. ಮಾರ್ಗ ಮಧ್ಯೆ ಈ ಹಳೆಯ ಬಸ್ ದುರಸ್ತಿಯಾದ್ರೆ ಅಥವಾ ಅಪಘಾತ ಸಂಭವಿಸಿದ್ರೆ ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆ ನೇರ ಹೊಣೆಗಾರಿಕೆ ಹೊರಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ತಾತ್ಸಾರ ಮನೋಭಾವ:
ಶಾಲಾ, ಕಾಲೇಜು ವಿದ್ಯಾರ್ಥಿಗಳೆಂದರೆ ಕೆಎಸ್ಆರ್ಟಿಸಿ ಸಂಸ್ಥೆಯವರಿಗೆ ತಾತ್ಸಾರ ಮನೋಭಾವ ಇದೆ. ವಿದ್ಯಾರ್ಥಿಗಳು ಶುಲ್ಕವನ್ನು ಪಾವತಿಸಿ ಬಸ್ ಪಾಸ್ ಪಡೆದರೂ ಕೂಡ ಬಸ್ಸಿನೊಳಗೆ ಪ್ರಯಾಣಿಸಲು ಚಾಲಕ ಮತ್ತು ನಿರ್ವಾಹಕರು ಆಸ್ಪದ ಕೊಡುತ್ತಿಲ್ಲ. ಹೀಗಾದ್ರೆ ನಾವ್ ವಿದ್ಯಾಭ್ಯಾಸ ಮಾಡೋದು ಹೇಗೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪರ್ಯಾಯ ವ್ಯವಸ್ಥೆ ಇಲ್ಲ:
ಮಾರ್ಗ ಮಧ್ಯೆ ಈ ಬಸ್ ಏನಾದ್ರೂ ಆದರೆ ಪರ್ಯಾಯ ವ್ಯವಸ್ಥೆಯನ್ನೇ ಕೆಎಸ್ಆರ್ಟಿಸಿ ಕಲ್ಪಿಸೋದಿಲ್ಲ. ನಾವೇ ಬಸ್ನಿಂದ ಕೆಳಗಿಳಿದು ಆ ಮಾರ್ಗದಲ್ಲಿ ಸಂಚರಿಸುತ್ತಿರುವ ದ್ವಿಚಕ್ರ ವಾಹನ ಅಥವಾ ಯಾವುದಾದ್ರೂ ಸರಕು ಸಾಗಣೆ ವಾಹನ ಹಾಗೂ ಸಾರ್ವಜನಿಕ ಸಂಚಾರದ ವಾಹನಗಳಿಗಳ ಸಹಾಯದಿಂದ ಶಾಲಾ, ಕಾಲೇಜುಗಳಿಗೆ ಹೋಗಬೇಕು ಎಂದು ವಿದ್ಯಾರ್ಥಿಗಳು ಸಂಸ್ಥೆಯ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ.