ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಹಂಪಸಾಗರ ಸೇವಾಲಾಲ್ ಶಾಲೆಯ ವಿದ್ಯಾರ್ಥಿಗಳು ಟೆಂಪೋದಲ್ಲಿ ತೆರಳುತ್ತಿದ್ದ ವೇಳೆ ಹಿರೇಹಡಗಲಿ ಬಳಿ ಭಾರಿ ರಸ್ತೆ ಅಪಘಾತ ಸಂಭವಿಸಿದೆ.

ಹಿರೇಹಡಗಲಿಯ ಕೆರೆ ಬಳಿ ಬರುವಾಗ ಓವರ್ ಟೇಕ್ ಮಾಡುವ ಸಮಯದಲ್ಲಿ ಶಾಲಾ ವಾಹನ (ಟಿಂಪೋ) 20 ಅಡಿ ಆಳದ ತಗ್ಗು ಪ್ರದೇಶಕ್ಕೆ ಬಿದ್ದು, ಐದನೇ ತರಗತಿ ವಿದ್ಯಾರ್ಥಿ ಕಿಶೋರ್ ಎಂಬಾತ ಮೃತಪಟ್ಟಿದ್ದಾನೆ. ಪ್ರಿಯಾಂಕ ಎಂಬ ವಿದ್ಯಾರ್ಥಿನಿ ಕೈಗೆ ಗಂಭೀರ ಗಾಯವಾಗಿದೆ.
ಅಷ್ಟೇ ಅಲ್ಲದೆ, ಐವರಿಗೆ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರೆ, 10 ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಡ್ರೈವರ್ ಕುಡಿದು ಟೆಂಪೋ ವಾಹನ ಚಲಾಯಿಸುತ್ತಿದ್ದ ಎನ್ನುವ ಮಾಹಿತಿ ತಿಳಿದುಬಂದಿದೆ.
ಸ್ಥಳಕ್ಕೆ ಆಂಬ್ಯುಲೆನ್ಸ್ ದೌಡಾಯಿಸಿದ್ದು, ಗಾಯಗೊಂಡ ವಿದ್ಯಾರ್ಥಿಗಳನ್ನು ಹಡಗಲಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.