ಬಳ್ಳಾರಿ: ಮಕ್ಕಳಲ್ಲಿ ದೇವರನ್ನು ಕಂಡು, ಮಹಿಳೆಯರನ್ನು ಗೌರವಿಸಬೇಕು. ಬಾಲ್ಯವಿವಾಹ-ದೇವದಾಸಿಯಂತಹ ಅನಿಷ್ಠ ಪದ್ದತಿಗಳನ್ನು ತೊಲಗಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯದರ್ಶಿ ಅರ್ಜುನ್.ಎಸ್.ಮಲ್ಲೂರ್ ತಿಳಿಸಿದ್ದಾರೆ.
ನಗರದ ಬಿಡಿಎಎ ಫುಟ್ಬಾಲ್ ಮೈದಾನದ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ, ಕಾರ್ಡ್-ಜ್ಞಾನಜ್ಯೋತಿ ಕಾಲೇಜು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಬಾಲ್ಯ ವಿವಾಹ, ದೇವದಾಸಿ ಪದ್ದತಿಗಳನ್ನು ತಡೆಗಟ್ಟುವಲ್ಲಿನ ಸವಾಲುಗಳು ಕುರಿತ ರಾಜ್ಯಮಟ್ಟದ ಸಾರ್ವಜನಿಕ ಸಂವಾದಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಬಾಲ್ಯವಿವಾಹ, ದೇವದಾಸಿ ಪದ್ದತಿಗಳು ರಾಷ್ಟ್ರಪಿತನ ಅಲೋಚನೆಗೆ ವಿರೋಧವಾದ ಅನಿಷ್ಠ ಪದ್ಧತಿಗಳು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ ಇಂದಿಗೂ ಇಂತಹ ಪದ್ದತಿಗಳ ಜೀವಂತವಾಗಿರೋದು ವಿಷಾದನೀಯ. ಮಕ್ಕಳನ್ನು ಬಾಲ್ಯವಿವಾಹ ಎಂಬ ಅನಿಷ್ಟ ಪದ್ಧತಿಗೆ ದೂಡುವುದು ಎಷ್ಟು ಸರಿ. ಹಿರಿಯರು ಇದನ್ನು ಸಂಪ್ರದಾಯ ಎನ್ನುತ್ತಾರೆ. ಮಕ್ಕಳನ್ನು ವಿವಾಹದ ಸಂಕೋಲೆಗೆ ಒಳಪಡಿಸುವುದು ಯಾವ ಸಂಪ್ರದಾಯ. ಸರಿಯಾದ ವಯಸ್ಸಿಗೆ ಮದುವೆಯಾದರೆ ಮಾತ್ರ ಅವರು ಆರೋಗ್ಯದಿಂದಿರಲು ಸಾಧ್ಯ. ಅವರು, ಮಾನಸಿಕ ಮತ್ತು ದೈಹಿಕವಾಗಿ ಸಿದ್ಧರಾದ ನಂತರವೇ ಮದುವೆಯಾಗಬೇಕು ಎಂದರು.
ದೇವದಾಸಿ ಪದ್ಧತಿಯನ್ನು ಯಾವ ದೇವರೂ ಒಪ್ಪಿಕೊಳ್ಳುವುದಿಲ್ಲ. ಇದು ದೇವರ ಹೆಸರಿನಲ್ಲಿ ನಡೆಯುತ್ತಿರುವ ಅನಿಷ್ಟ ಪದ್ಧತಿ. ಮಹಿಳೆಯರನ್ನು ದೇವರಿಗೆ ಹೋಲಿಸಲಾಗಿದೆ. ಮಹಿಳೆಯರನ್ನು ಈ ಅನಿಷ್ಟ ಪದ್ದತಿಯಿಂದ ಹೊರತಂದು ಉತ್ತಮ ಜೀವನ ರೂಪಿಸಿ ಕೊಡಬೇಕಿದೆ. ದೇವದಾಸಿ ಮಹಿಳೆಯರ ಪುನಶ್ಚೇತನದಲ್ಲಿ ಅನೇಕ ಸಮಸ್ಯೆಗಳು ತಲೆದೂರಿವೆ. ಕಾನೂನಾತ್ಮಕ ಸಮಸ್ಯೆಗಳು ಕಂಡು ಬಂದಲ್ಲಿ ನಮ್ಮ ವಕೀಲರು ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಸಮಸ್ಯೆಗಳಿದ್ದಲ್ಲಿ ನೇರವಾಗಿ ನಮ್ಮನ್ನು ಭೇಟಿಯಾಗಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೀಡ್ಸ್ ಸಂಸ್ಥೆಯ ತಿಪ್ಪೇಶಪ್ಪ, ವಿ.ಎಸ್.ಕೆ ವಿವಿ ಸಿಂಡಿಕೇಟ್ ಸದಸ್ಯ ಮಲ್ಲಿಕಾರ್ಜುನ ಮರ್ಚೆಡ್ ಗೌಡ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಎಚ್.ಸಿ.ರಾಘವೇಂದ್ರ, ಡಿವೈಎಸ್ಪಿ ಮಹೇಶಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ, ಪ್ರಾಧ್ಯಾಪಕ ಡಾ.ಸಂತೋಷ ಕುಮಾರ, ಡಾ.ಭಾಗ್ಯಲಕ್ಷ್ಮಿ, ಗೌರಿ ಮಾನಸ, ಹಿರೇಮಠ, ಬಿ.ಡಿ.ಗೌಡ ಇದ್ದರು.