ಬಳ್ಳಾರಿ : ವಿಮಾನ ನಿಲ್ದಾಣ ನಿರ್ಮಾಣ ವಿಚಾರ ಮುಂದಿಟ್ಟು ರೈತರನ್ನು ಒಕ್ಕಲೆಬ್ಬಿಸಿದ್ರೆ ಎಂತಹ ಹೋರಾಟಕ್ಕೂ ತಾನು ಸಿದ್ಧ ಎಂದು ಚಾಗನೂರು-ಸಿರವಾರ ಹೋರಾಟ ಸಮಿತಿಯ ಮುಖಂಡ ಮಲ್ಲಿಕಾರ್ಜುನ ರೆಡ್ಡಿ ಎಚ್ಚರಿಸಿದ್ದಾರೆ.
ಬಳ್ಳಾರಿಯಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಜಿಲ್ಲಾಡಳಿತದ ಮೂಲಕ ಮತ್ತೊಮ್ಮೆ ಫಿಜಿಬಲಿಟಿ ಟೆಸ್ಟ್ ಮಾಡಿಸಿರೋದು ನನ್ನ ಗಮನಕ್ಕೆ ಬಂದಿದೆ. ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣದ ವಿವಾದವು ಹೈಕೋರ್ಟ್ ಮೆಟ್ಟಿಲೇರಿದೆ. ಯಾವುದೇ ಕಾರಣಕ್ಕೂ ರೈತರನ್ನ ಒಕ್ಕಲೆಬ್ಬಿಸುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಬಾರದು. ಏರ್ಪೋರ್ಟ್ ಅಥವಾ ಏರ್ಸ್ಟ್ರೀಪ್ ನಿರ್ಮಾಣದ ಬಗ್ಗೆ ಚಿಂತನೆ ನಡೆಸಿರೋದು ತರವಲ್ಲ. ಈಗಾಗಲೇ ಈ ವಿವಾದ ಹೈಕೋರ್ಟ್ ಮೆಟ್ಟಿಲೇರಿದೆ.
ನಾವು 1ನೇ ಬೆಂಚ್‌ನಲ್ಲಿ ಗೆದ್ದಿದ್ದೇವೆ. 2ನೇ ಬೆಂಚ್‌ಗೆ ಈ ವಿವಾದ ಹಸ್ತಾಂತರಗೊಂಡಿದೆ. ಅಲ್ಲಿಯೂ ಕೂಡ ನಮ್ಮ ಪರ ತೀರ್ಪು ಬರುವ ನಿರೀಕ್ಷೆಯಲ್ಲಿದ್ದೇವೆ. ಈಗಾಗಲೇ ಮಧ್ಯಂತರ ತೀರ್ಪನ್ನು ಘನ ನ್ಯಾಯಾಲಯವು ಹೊರಡಿಸಿದ್ದರೂ ಕೂಡ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣದ ವಿವಾದ ಮುನ್ನಲೆಗೆ ತರೋದಕ್ಕೆ ರಾಜ್ಯ ಸರ್ಕಾರ ಪ್ರಯತ್ನಿಸಿರೋದು ತರವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಈಗಾಗಲೇ ಕೃಷಿಯೋಗ್ಯ ನೀರಾವರಿ ಭೂಮಿಯಲ್ಲಿ ಫಿಜಿಬಲಿಟಿ ಟೆಸ್ಟ್ ಮಾಡಿಸಿದ್ದೀರಿ. ಈಗ ಮತ್ತೊಂದು ಬಾರಿ ಜಿಲ್ಲಾಡಳಿತದ ಮೂಲಕ ಫಿಜಿಬಲಿಟಿ ಟೆಸ್ಟ್ ಮಾಡಿಸಿದ್ದೀರಿ. ಮೊದಲ ಬಾರಿಗೆ ನೀಡಿದ ಟೆಸ್ಟ್ ನಿಜವಾದ್ರೆ ಅಥವಾ 2ನೇ ಬಾರಿಯ ಟೆಸ್ಟ್ ಸುಳ್ಳಾದ್ರೆ ಉದ್ದೇಶಿತ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಕೈಬಿಡುತ್ತಿರೋ ಎಂಬುದನ್ನು ಮೊದಲು ಸ್ಪಷ್ಟಪಡಿಸಿ. ಆ ಎರಡು ಟೆಸ್ಟ್‌ಗಳಲ್ಲಿ ಯಾವುದೇ ತರನಾದ ತೀರ್ಪು ಬಂದರೂ ಕೂಡ ಅನ್ಯಾಯ ಆಗೋದು ರೈತರಿಗೆ ಎಂದು ರೆಡ್ಡಿ ಕಿಡಿಕಾರಿದ್ದಾರೆ.