ಬಳ್ಳಾರಿ: ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮಂಡಿಸಿರುವ ರಾಜ್ಯ ಬಜೆಟ್ ಮೇಲ್ನೋಟಕ್ಕೆ ಕೃಷಿ ಪರವಾದುದು ಎಂದು ಕಂಡು ಬಂದರೂ, ಅದರಿಂದ ರೈತರಿಗೆ ಪ್ರಯೋಜನವಿಲ್ಲ ಎಂದು ರಾಜ್ಯ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಜೆಟ್ನಲ್ಲಿ ಕೃಷಿಗೆ 21 ಸಾವಿರ ಕೋಟಿ ರೂಪಾಯಿ ತೋರಿಸಿದ್ದರೂ ಅದರಿಂದ ರೈತರಿಗೆ ಲಾಭವಿಲ್ಲ. ಎಂಎನ್ಸಿ ಕಂಪನಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಜೆಟ್ ರೂಪಿಸಿದ್ದಾರೆ ಎಂದು ಹೇಳಿದರು.
ರೈತರಿಗೆ ಬೇಕಾದ ಕಾಯ್ದೆ ನೀಡುವಲ್ಲಿ ಕೇಂದ್ರ ವಿಫಲವಾಗಿದೆ. ಬಲವಂತದ ಕಾಯ್ದೆ ನಾವು ಒಪ್ಪಲ್ಲ. ಹಠಮಾರಿ ಧೋರಣೆಯನ್ನು ಸರ್ಕಾರ ಕೈ ಬಿಡಬೇಕು. ಒಂದು ವರ್ಷ ಕಾಯ್ದೆ ಜಾರಿಗೆ ತರವುದಿಲ್ಲ ಎಂದರೂ ತೆರೆಮರೆ ಕಸರತ್ತನ್ನು ಮೊದಲು ಬಿಡಬೇಕು. ಸ್ವಾಮಿನಾಥನ್ ವರದಿ ಪ್ರಕಾರ ಎಂಎಸ್ಪಿ (ಕನಿಷ್ಠ ಬೆಂಬಲ ಬೆಲೆ) ಕೊಡುತ್ತಿಲ್ಲ. ಎಂಎಸ್ಪಿ ಕೊಡುತ್ತೇವೆ ಎಂದು ಸರ್ಕಾರ ರೈತರಿಗೆ ಮೋಸ ಮಾಡುತ್ತಿದೆ. ಯಡಿಯೂರಪ್ಪ ಮತ್ತು ಮೋದಿ ರೈತರನ್ನು ಹಗಲು ದರೋಡೆ ಮಾಡಲಾಗುತ್ತಿದ್ದಾರೆ ಎಂದು ಆರೋಪಿಸಿದರು.
ಇದನ್ನೂ ಓದಿ: ಮಾನಹಾನಿ ಸುದ್ದಿ ಪ್ರಸಾರಕ್ಕೆ ತಡೆ ಕೋರಿ ಕೋರ್ಟ್ ಮೊರೆ ಹೋಗಲ್ಲ: ಎಂಟಿಬಿ ನಾಗರಾಜ್
ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಮಾಡಲು ಸಾಧ್ಯವಿಲ್ಲ. ಆದರೆ ಆರನೇ ವೇತನ ಆಯೋಗ ಜಾರಿಗೆ ತರುತ್ತೇವೆ ಎಂದಿದ್ದರು. ಆದರೆ ಅದಕ್ಕೆ ಬಜೆಟ್ ನಲ್ಲಿ ಹಣ ನಿಗದಿ ಮಾಡಿಲ್ಲ ಎಂದು ತಿಳಿಸಿದರು.
ತುಂಗಭದ್ರಾ ಬಲದಂಡೆ ಕೆಳಮಟ್ಟದ (ಎಲ್ಎಲ್ಸಿ) ಕಾಲುವೆ ವ್ಯಾಪ್ತಿಯಲ್ಲಿ ರೈತ ಬೆಳೆದಿರುವ ಬೇಸಿಗೆ ಬೆಳೆ ಸಂಪೂರ್ಣವಾಗಿ ಬರಲು ಅಗತ್ಯವಾದ ನೀರನ್ನು ಒದಗಿಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.