ಬೆಂಗಳೂರು: ಪರ ಪುರುಷನೊಂದಿಗೆ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಕ್ಕೆ ಬೇಸರಗೊಂಡು ಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಲ್ಲಿ ಪತ್ನಿಯನ್ನು ಶಿಕ್ಷೆಗೆ ಗುರಿಪಡಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತಿಯ ಆತ್ಮಹತ್ಯೆಗೆ ಪ್ರಚೋದಿಸಿದ ಅಪರಾಧದಡಿ ತಮಗೆ ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ನಿವಾಸಿಗಳಾದ ಪ್ರೇಮಾ ಮತ್ತು ಬಸವಲಿಂಗೇ ಗೌಡ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಶಿವಶಂಕರ್ ಅಮರಣ್ಣನವರ್ ಅವರ ಪೀಠ ಈ ಆದೇಶ ಮಾಡಿದೆ.
ಅಲ್ಲದೆ, ನಿರ್ದಿಷ್ಟ ಕೆಲಸವನ್ನು ಮಾಡುವಂತೆ ಪ್ರಚೋದನೆ ನೀಡುವುದನ್ನು ಪ್ರಚೋದನೆ ಎನ್ನಲಾಗುತ್ತದೆ. ಆಗ ಮಾತ್ರ ಅದು ಪ್ರಚೋದನೆ ಅಪರಾಧವಾಗುತ್ತದೆ. ಮೇಲ್ಮನವಿ ಸಲ್ಲಿಸಿರುವ ಆರೋಪಿಗಳು ಅಕ್ರಮ ಸಂಬಂಧ ಹೊಂದಿರುವುದು ಆತ್ಮಹತ್ಯೆಗೆ ಪ್ರಚೋದನೆ ನೀಡಿದಂತಾಗುವುದಿಲ್ಲ. ವ್ಯಕ್ತಿ ಆತ್ಮಹತ್ಯೆಗೆ ಪ್ರಚೋದನೆ ನೀಡುವುದನ್ನು ತೋರಿಸಲು ಅರ್ಜಿದಾರ ಆರೋಪಿಗಳು ನಿರ್ದಿಷ್ಟ ನಡೆ ಪ್ರದರ್ಶಿಸಿರುವುದಕ್ಕೆ ನಿಖರ ಸಾಕ್ಷ್ಯಗಳು ಇರಬೇಕಾಗುತ್ತವೆ. ಇಲ್ಲವಾದರೆ ಆತ್ಮಹತ್ಯೆಗೆ ಪ್ರಚೋದನೆ ಅಪರಾಧವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧದಡಿ ಪ್ರೇಮಾ ಮತ್ತು ಬಸವಲಿಂಗೇ ಗೌಡ ಅವರನ್ನು ಅಪರಾಧಿಗಳು ಎಂದು ತೀರ್ಮಾನಿಸಿ ಇಬ್ಬರಿಗೆ ಕ್ರಮವಾಗಿ ಮೂರು ಮತ್ತು ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದ್ದ ಅಧೀನ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಆದೇಶಿಸಿದೆ. ಜೊತೆಗೆ, ಬಸವಲಿಂಗೇ ಗೌಡ ತನ್ನ ಮೇಲೆ ಹಲ್ಲೆ ನಡೆಸಿ ಅವಮಾನ ಮಾಡಿದ್ದಾರೆ ಎಂಬುದಾಗಿ ಸದಾಶಿವ ಮೂರ್ತಿಯು ಸಾವನ್ನಪ್ಪುವ 15 ದಿನಗಳು ಮುನ್ನ ತನಗೆ ಹೇಳಿದ್ದರು ಎಂದು ಪ್ರಕರಣದ 8ನೇ ಸಾಕ್ಷಿ ಸಾಕ್ಷ್ಯ ತಿಳಿಸಿದ್ದಾರೆ. ಒಂದೊಮ್ಮೆ ಬಸವಲಿಂಗೇ ಗೌಡ ಹಲ್ಲೆ ಮಾಡಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ದೂರು ದಾಖಲಿಸಬಹುದಾಗಿತ್ತು. ಅಲ್ಲದೆ, ಸದಾಶಿವ ಮೂರ್ತಿ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬ ಉದ್ದೇಶ ಆರೋಪಿಗಳು ಹೊಂದಿರಲಿಲ್ಲ. 'ನೀನು ಹೋಗಿ ಸಾಯಿ. ನೀನು ಸತ್ತರೆ ನಾವು ಸಂತೋಷದಿಂದ ಜೀವನ ನಡೆಸುತ್ತೇವೆ' ಎಂಬುದಾಗಿ ಆರೋಪಿಗಳು ಆ ವ್ಯಕ್ತಿಗೆ ಹೇಳಿದ ಮಾತ್ರಕ್ಕೆ ಅದು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಪರಾಧವಾಗುವುದಿಲ್ಲ ಕೋರ್ಟ್ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಪ್ರೇಮಾ ಹಾಗೂ ಬಸವಲಿಂಗೇ ಗೌಡ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊನ್ನಲಗೆರೆ ಗ್ರಾಮದ ನಿವಾಸಿಗಳು. ಸದಾಶಿವಮೂರ್ತಿ ಎಂಬುವರನ್ನು ಮದುವೆಯಾಗಿದ್ದ ಪ್ರೇಮಾ, ಬಸವಲಿಂಗೇ ಗೌಡ ಜೊತೆಗೆ ವಿವಾಹೇತರ ಸಂಬಂಧ ಹೊಂದಿದ್ದರು. ಇದೇ ವಿಚಾರವಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಸದಾಶಿವಮೂರ್ತಿ 2010ರ ಜು.15ರಂದು ಮರಕ್ಕೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
2010ರ ಜು.10ರಂದು ಸಂಜೆ 4 ಗಂಟೆಗೆ ಸದಾಶಿವಮೂರ್ತಿ ಮನೆ ಮುಂದೆ ಹೋಗಿದ್ದ ಬಸವಲಿಂಗೇ ಗೌಡ, 'ನೀನು ಸಾಯಿ. ಆಗ ನಾನು ಮತ್ತು ಪ್ರೇಮ ಸಂತೋಷದಿಂದ ಜೀವನ ನಡೆಸುತ್ತೇವೆ' ಎಂದು ಹೇಳಿ ಅವಮಾನ ಮಾಡಿದ್ದರು. ಇದರಿಂದ ಅಸಮಾಧಾನಗೊಂಡು ಸದಾಶಿವಮೂರ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು.
ಪ್ರಕರಣವನ್ನು ದಾಖಲಿಸಿಕೊಂಡಿದ್ದ ಕೆ.ಎಂ. ದೊಡ್ಡಿ ಠಾಣಾ ಪೊಲೀಸರು ತನಿಖೆ ನಡೆಸಿ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರೇಮಾ ಮತ್ತು ಬಸವಲಿಂಗೇ ಗೌಡ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಮಂಡ್ಯ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ, ಪ್ರೇಮಾಗೆ ಮೂರು ವರ್ಷ ಮತ್ತು ಬಸವಲಿಂಗೇ ಗೌಡಗೆ ನಾಲ್ಕು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ ಐದು ಸಾವಿರ ರೂ. ದಂಡ ವಿಧಿಸಿ 2013ರ ಜ.1ರಂದು ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ಆರೋಪಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: 13 ವರ್ಷದ ಅತ್ಯಾಚಾರ ಸಂತ್ರಸ್ತೆಯ 28 ವಾರಗಳ ಭ್ರೂಣದ ಗರ್ಭಪಾತಕ್ಕೆ ಅನುಮತಿಸಿದ ಹೈಕೋರ್ಟ್