ಬಳ್ಳಾರಿ: ಕೊರೊನಾ ಸೋಂಕಿನ ಭೀತಿಯಿಂದ ರಾಜ್ಯವನ್ನು ಲಾಕ್ಡೌನ್ ಮಾಡಲಾಗಿದ್ದು, ಈ ಸಂಬಂಧ ಬಳ್ಳಾರಿಯ ಅಂತರ್ ರಾಜ್ಯ ಗಡಿಯಲ್ಲಿ ಅಂದಾಜು 11 ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ನೆರೆ ಹೊರೆಯ ರಾಜ್ಯಗಳಿಂದ ಬರುವ ಲಘು ಮತ್ತು ಭಾರೀ ವಾಹನ ಸೇರಿದಂತೆ ದ್ವಿಚಕ್ರ ವಾಹನಗಳ ತಪಾಸಣೆ ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಸಿ.ಕೆ.ಬಾಬಾ ನೇತೃತದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಆದೇಶದಂತೆ ಅಗತ್ಯ ವಸ್ತುಗಳ ವಾಹನ ಹಾಗೂ ತುರ್ತು ವಾಹನಗಳ ಸಂಚಾರ ಬಿಟ್ಟು, ಉಳಿದ ವಾಹನ ಸಂಚಾರ ಸ್ಥಗಿತಗೊಳಿಸಲಾಯಿತು. ಸರ್ಕಾರದ ಸೂಚನೆಗಳನ್ನು ನಿರ್ಲಕ್ಷಿಸಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಾಬಾ ಎಚ್ಚರಿಕೆ ನೀಡಿದರು.
ಎಲ್ಲಾ ತರಕಾರಿಗಳ ದರ ಪಟ್ಟಿ ಪ್ರದರ್ಶಿಸುವಂತೆ ಎಪಿಎಂಸಿ ಕಾರ್ಯದರ್ಶಿ ಹಾಗೂ ದಲ್ಲಾಳಿಗಳ ಜೊತೆ ಚರ್ಚಿಸಲಾಗಿದೆ. ಜೊತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸುವಂತೆ ಸೂಚಿಸಿದ್ದಾರೆ. ಎಲ್ಲಾ ವಾಹನಗಳ ಸಂಖ್ಯೆಯನ್ನು ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾವಣ್ಯ, ಗ್ರಾಮಾಂತರ ಪೊಲೀಸ್ ಠಾಣೆಯ ಸಿಪಿಐ ಮನ್ನೆ ಶ್ರೀನಿವಾಸ, ಪಿಎಸ್ಐ ವೈ.ಎಸ್.ಹನುಮಂತಪ್ಪ ನೇತೃತ್ವದ ತಂಡ ಬೆಳಿಗ್ಗೆಯಿಂದಲೇ ವಾಹನಗಳ ತಪಾಸಣೆಗೆ ಮುಂದಾಗಿತ್ತು.