ಬಳ್ಳಾರಿ: ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು ನನ್ನ ಬಗ್ಗೆ ಏನೇ ಮಾತಾಡ್ಲಿ, ನಾನೇನು ಮಾತಾಡಲ್ಲ. ಅವರು ನಮ್ಮಣ್ಣ, ಅಣ್ಣನಾಗೇ ಇರಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯ ಹಡಗಲಿ ಪಟ್ಟಣದಲ್ಲಿ ಇಂದು ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಶ್ರೀರಾಮುಲು ನನ್ನ ಬಗ್ಗೆ ಏನೇ ಟೀಕಿಸಿದ್ರೂ ನಾನು ಆ ಕಡೆ ಕಿವಿಗೊಡಲಾರೆ. ಯಾಕಂದ್ರೆ ಅವ್ರು ನಮ್ಮಣ್ಣ ಇದ್ಹಂಗ. ಇನ್ನೂ ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರು ದೇವರು ಇದ್ಹಂಗೆ. ಹಾಗೇ ಇರಲಿ ಎಂದು ಹಾರೈಸಿದರು.
ಬಳ್ಳಾರಿ ಲೋಕಸಭಾ ಚುನಾವಣಾ ಮಟ್ಟಿಗೆ ಬಿಜೆಪಿಯ ದೇವೇಂದ್ರಪ್ಪ ನಮಗೆ ಎದುರಾಳಿಯಲ್ಲ. ಹಾಗಾಗಿ, ಅವರ ಬಗ್ಗೆ ಮಾತನಾಡುವ ಅಗತ್ಯವೇ ಇಲ್ಲ. ನಮ್ಮ ಪಕ್ಷದ ಅಭ್ಯರ್ಥಿ ಉಗ್ರಪ್ಪ ಬುದ್ಧಿವಂತರಿದ್ದಾರೆ. ಮೋದಿ ಎದುರು ಮಾತಾಡಿ ಅಂತ ಹೇಳಿದ್ರೆ ದೇವೇಂದ್ರಪ್ಪನವರ ವಿರುದ್ಧ ಮಾತನಾಡುತ್ತಿದ್ದಾರೆ. ನಮಗೆ ದೇವೇಂದ್ರಪ್ಪನವರು ಎದುರಾಳಿಯೇ ಅಲ್ಲ ಎಂದರು.
ಸಚಿವ ಪಿಟಿಪಿ ಸ್ಪೀಡ್ ಜಾಸ್ತಿ:
ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸಚಿವ ಪಿ.ಟಿ.ಪರಮೇಶ್ವರ ನಾಯ್ಕಗೆ ಸ್ವಲ್ಪ ಸ್ಪೀಡ್ ಜಾಸ್ತಿ. ನಾನೇ ಆ ಸ್ಪೀಡ್ಗೆ ಕಡಿವಾಣ ಹಾಕಿದ್ದೇನೆ. ಜನರ ಮೇಲೆ ದಬ್ಬಾಳಿಕೆ ಮಾಡೋದನ್ನ ನಿಲ್ಸಿ ಸೇವಕನಾಗಿ ಕೆಲ್ಸ ಮಾಡಬೇಕು ಎಂದು ಸೂಚಿಸಿರುವೆ ಎಂದಾಗ ಸಭಿಕರು ನಸು ನಕ್ಕರು. ಪರಮೇಶ್ವರ ಕೆಲಸ ಮಾಡ್ತಾರೆ ಎಂಬ ಮಾತು ಸಭಿಕರಿಂದ ತೂರಿ ಬಂದಾಗ ಸಚಿವ ಡಿಕೆಶಿ, ವೇದಿಕೆ ಮೇಲಿದ್ದ ಮುಖಂಡರತ್ತ ಮುಖಮಾಡಿ ಏನ್ರಪ್ಪ ಕೆಲ್ಸ ಮಾಡ್ತಾರಾ ಎಂದು ಪ್ರಶ್ನಿಸಿದರು. ಆಗ ಮುಖಂಡರು ತಲೆ ಅಲ್ಲಾಡಿಸಿದರು. ಅಧಿಕಾರವಿರಲಿ, ಇಲ್ಲದೇ ಇರಲಿ ಪಿಟಿಪಿ ಕೆಲಸ ಮಾಡ್ತಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈಶ್ವರಪ್ಪ ವಿರುದ್ಧ ಹರಿಹಾಯ್ದ ಡಿಕೆಶಿ:
ಬಿಜೆಪಿ ಮುಖಂಡರಾದ ಕೆ.ಎಸ್.ಈಶ್ವರಪ್ಪನವರು ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಲೋಕಸಭಾ ಚುನಾವಣೆ ಬಳಿಕ ನೆಗೆದು ಬೀಳಲಿದೆ ಎಂದಿದ್ದಾರೆ. ಇದು ಅವರ ಸಂಸ್ಕೃತಿನಾ ಎಂದು ಸಚಿವರು ಪ್ರಶ್ನಿಸಿದರು.
ಹಾಲಿ ಸಂಸದ ಉಗ್ರಪ್ಪ ಪಂಚಾಯಿತಿ ಕೆಲಸ ಮಾಡ್ಲಿ ಅಂತಾ ನಾನು ಹೇಳಿಲ್ಲ. ಆ ಪಂಚಾಯಿತಿ ಕೆಲ್ಸನಾ ನನ್ನ ಸಹೋದರ ಡಿ.ಕೆ.ಸುರೇಶ ಹಾಗೂ ಸಚಿವ ಪಿ.ಟಿ.ಪರಮೇಶ್ವರ ನಾಯ್ಕ ಮಾಡ್ಲಿ. ಉಗ್ರಪ್ಪ ಪಾರ್ಲಿಮೆಂಟ್ನಲ್ಲಿ ಮಾತನಾಡಲಿ ಎಂದರು.
ಇನ್ನು ಶಾಸಕ ಶ್ರೀರಾಮುಲು ತಾನು ಕುಸ್ತಿ ಮಾಡೋದು ಬಿಟ್ಟು ದೇವೇಂದ್ರಪ್ಪನವರನ್ನು ಕಳಿಸಿದ್ದಾರೆ. ಶ್ರೀರಾಮುಲು ನಮ್ಮ ಅಣ್ಣ, ಅವ್ರು ಹಂಗೆ ಇರಲಿ. ಬಿಜೆಪಿ ಅಭ್ಯರ್ಥಿ ದೇವೇಂದ್ರಪ್ಪನವರು ಪಂಚೆ ತೆಗೆದು, ಜುಬ್ಬಾ ಹಾಕಿದ್ದಾರೆ. ದೇವೇಂದ್ರಪ್ಪಗೆ ಉಗ್ರಪ್ಪ ಸೂಟು ಗಿಫ್ಟ್ ಕೊಡಿಸಲಿ. ಅವರಿನ್ನೂ ಹುಡ್ಗ ಕಂಡ ಹಾಗೆ ಕಾಣಲಿ. ನಮಗೆ ಅಭ್ಯಂತರವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.