ಬಳ್ಳಾರಿ: ಸಚಿವ ಬಿ.ಶ್ರೀರಾಮುಲುಗೆ ಕೊರೊನಾ ಸೋಂಕು ತಗುಲಿರುವ ಕಾರಣ ಶೀಘ್ರ ಗುಣಮುಖರಾಗಲೆಂದು ಮಾಜಿ ಉಪ ಮೇಯರ್ ಎಂ.ಗೋವಿಂದರಾಜಲು ತೆಂಗಿನಕಾಯಿ ಹರಕೆ ತೀರಿಸಿದ್ದಾರೆ.
ನಗರದ ಐತಿಹಾಸಿಕ ಪ್ರಸಿದ್ಧ ಕೋಟೆ ಮಲ್ಲೇಶ್ವರ ದೇಗುಲದಲ್ಲಿಂದು ವಿಶೇಷ ಪೂಜೆ ಸಲ್ಲಿಸಿದ ಗೋವಿಂದರಾಜಲು, ಸುಮಾರು 116 ತೆಂಗಿನಕಾಯಿ ಒಡೆದು ಹರಕೆ ತೀರಿಸಿದರು. ಸಚಿವ ಶ್ರೀರಾಮುಲು ಅಭಿಮಾನಿಗಳಿಂದಲೂ ವಿಶೇಷ ಪೂಜೆ ಸಲ್ಲಿಸಲಾಯಿತು.
ನಂತರ ಮಾತನಾಡಿದ ಗೋವಿಂದರಾಜಲು, ಮಹಾಮಾರಿ ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಡೀ ರಾಜ್ಯಾದ್ಯಂತ ಓಡಾಡಿ ಜನರಿಗೆ ಆತ್ಮಸ್ಥೈರ್ಯ ತುಂಬಿದ್ದ ಸಚಿವ ಶ್ರೀರಾಮುಲುಗೆ ಕೊರೊನಾ ಬಂದಿರೋದು ನೋವಿನ ಸಂಗತಿ. ಎಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿಯನ್ನ ಸಚಿವ ಶ್ರೀರಾಮುಲುಗೆ ಕೋಟೆ ಮಲ್ಲೇಶ್ವರ ಕರುಣಿಸಲಿ ಎಂದು ಪ್ರಾರ್ಥಿಸುವೆ. ಶ್ರೀರಾಮುಲು ಬೇಗನೆ ಗುಣಮುಖರಾಗಲಿ ಎಂದು ಹಾರೈಸುವೆ ಎಂದರು.