ಬಳ್ಳಾರಿ: ನಗರದ ಹೊರವಲಯದಲ್ಲಿರುವ ಎಚ್ಎಲ್ಸಿ ಕೆನಾಲಿಗೆ ಶಾಸಕ ಸೋಮಶೇಖರ ರೆಡ್ಡಿ ಅವರು ಪೂಜೆ ಸಲ್ಲಿಸಿ, ಬಾಗಿನ ಅರ್ಪಿಸಿದರು. ಪಕ್ಷದ ಕಾರ್ಯಕರ್ತರು ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಮೊದಲಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕ ಅವರು, ಪ್ರತಿವರ್ಷ ಇದೇ ರೀತಿ ಮಳೆಯಾಗಲಿ. ಜಿಲ್ಲೆಯ ರೈತಾಪಿ ವರ್ಗ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಸಮೃದ್ಧಿಯ ಬೆಳೆ ಬೆಳೆಯುವಂತಾಗಲಿ ಎಂದು ಆಶಿಸಿದರು.
ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಕೂಡ ಸದಾ ಹೀಗೆ ಭರ್ತಿಯಾಗಲಿ. ಬಳ್ಳಾರಿ ಮಹಾನಗರಕ್ಕೆ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಆ ವರುಣ ದೇವ ನೋಡಿಕೊಳ್ಳಬೇಕು ಎಂದು ಪ್ರಾರ್ಥಿಸಿದರು.
ಮಹಾನಗರ ಪಾಲಿಕೆ ಆಯುಕ್ತ ತುಷಾರಮಣಿ, ಮಾಜಿ ಸದಸ್ಯರಾದ ಎಸ್.ಮಲ್ಲನಗೌಡ, ತೂರ್ಪು ಯಲ್ಲಪ್ಪ, ಶ್ರೀನಿವಾಸ ಮೋತ್ಕರ, ಶಾಸಕರ ಆಪ್ತ ಕಾರ್ಯದರ್ಶಿ ವೀರಶೇಖರ ರೆಡ್ಡಿ ಇದ್ದರು.