ವಿಜಯನಗರ: ಇಸ್ಟೀಟ್ ಅಡ್ಡೆ ಮೇಲೆ ದಾಳಿ ನಡೆಸಿ ಪೋಲಿಸರು ಹಣ ಮೊಬೈಲ್ ವಶಪಡಿಸಿಕೊಂಡು ಕೇಸ್ ದಾಖಲಿಸದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆ ನಾಲ್ವರು ಕಾನ್ಸ್ಟೇಬಲ್ಗಳನ್ನು ಅಮಾನತುಗೊಳಿಸಿ ಎಸ್ಪಿ ಡಾ ಅರುಣ್ ಕೆ ಆದೇಶ ಹೊರಡಿಸಿದ್ದಾರೆ.
ಹೊಸಪೇಟೆಯ ಹಳೆ ಕೆಇಬಿ ಹಿಂಭಾಗದಲ್ಲಿ ಇಸ್ಪೀಟ್ ಆಡುತ್ತಿದ್ದ ಅಡ್ಡೆ ಮೇಲೆ ನಾಲ್ವರು ಪೋಲಿಸ್ ಪೇದೆಗಳು ದಾಳಿ ಮಾಡಿದ್ದಾರೆ. ಈ ವೇಳೆ ಪೊಲೀಸರನ್ನು ಕಂಡು ಕೆಲ ಜೂಜುಕೋರರು ಓಡಿ ಹೋಗಿದ್ದಾರೆ. ಸಿಕ್ಕಿ ಬಿದ್ದ ಮೂವರು ಜೂಜುಕೋರರ ಬಳಿ ಹಣ ಹಾಗೂ ಮೊಬೈಲ್ ಜಪ್ತಿ ಮಾಡಿಕೊಂಡಿದ್ದಾರೆ.
ಸ್ಥಳೀಯರು ಪ್ರಕರಣದ ಕುರಿತು ಮಾಹಿತಿ ಪಡೆಯಲು ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ, ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ನಂತರ ವೆಂಕಟೇಶ್ ಎಂಬುವರು ನಾಲ್ವರು ಪೊಲೀಸ್ ಕಾನ್ಸ್ಟೇಬಲ್ ವಿರುದ್ಧ ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ನಾಲ್ವರು ಪೊಲೀಸ್ ಪೇದೆಗಳಾದ ಮಹೇಶ, ಅಭಿಷೇಕ್, ಮಂಜುನಾಥ, ಶ್ರೀಕಾಂತರನ್ನು ಪೊಲೀಸರು ನ್ಯಾಯಾಲಕ್ಕೆ ಹಾಜರು ಪಡಿಸಿದ್ದರು.
ನ್ಯಾಯಾಲಯ ನಾಲ್ವರು ಕಾನ್ಸ್ಟೇಬಲ್ಗಳನ್ನು ನ್ಯಾಯಾಂಗ ಬಂಧನ ವಿಧಿಸಿದೆ. ನಂತರ ಇಲಾಖೆ ವಿಚಾರಣೆ ಕಾಯ್ದಿರಿಸಿ ನಾಲ್ವರು ಕಾನ್ಸ್ಟೇಬಲ್ಗಳನ್ನು ಅಮಾನತು ಮಾಡಿ ಎಸ್ಪಿ ಡಾ ಅರುಣ್ ಕೆ ಆದೇಶ ಹೊರಡಿಸಿದ್ದಾರೆ.