ಬಳ್ಳಾರಿ: ಮದ್ಯದ ಅಂಗಡಿ ಪ್ರಾರಂಭಿಸುವಂತೆ ಆಗ್ರಹಿಸಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಸೋವೇನಹಳ್ಳಿ ಗ್ರಾಮದ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸಿದರು. ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯ ಎದುರು ನೂರಾರು ಗ್ರಾಮಸ್ಥರು ಜಮಾಯಿಸಿ ಕೆಲಕಾಲ ಬೇಕೇ ಬೇಕು, ಬಾರ್ ಬೇಕು, ಎಣ್ಣೆ ಬೇಕು ಎಂದು ಘೋಷಣೆ ಕೂಗಿದರು.
ಈ ಹಿಂದೆ ಸೋವೇನ ಹಳ್ಳಿಯಲ್ಲಿ ಅಕ್ರಮ ಮದ್ಯ ಮಾರಾಟ ಎಗ್ಗಿಲ್ಲದೆ ನಡೆಯುತ್ತಿತ್ತು. ಈ ಗ್ರಾಮದ ಮದ್ಯಪ್ರಿಯರ ಬೇಡಿಕೆಯಂತೆ ಈ ಗ್ರಾಮಕ್ಕೆ ಎಂಎಸ್ಐಎಲ್ ಬಾರ್ ಅಂಗಡಿ ಮಂಜೂರಾಗಿದ್ದು, ಅದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ವೈನ್ ಶಾಪ್ ಪ್ರಾರಂಭಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ ಇದೇ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವರು ಈ ವೈನ್ ಶಾಪ್ ಪ್ರಾರಂಭಿಸುವುದು ಬೇಡ, ವೈನ್ ಶಾಪ್ ಪ್ರಾರಂಭವಾದರೆ ಇಲ್ಲಿನ ಸಾಕಷ್ಟು ಬಡ ಜನರು ಮದ್ಯ ವ್ಯಸನಿಯಾಗಿ ಸಂಸಾರವನ್ನು ಹಾಳು ಮಾಡಿಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಬಾರ್ ಪ್ರಾರಂಭಿಸುವ ಸಂಬಂಧ ಈ ಸೋವೇನಹಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಗ್ರಾಮಸಭೆ ಕೂಡ ನಡೆದಿತ್ತು. ಸ್ಥಳೀಯರ ಅಭಿಪ್ರಾಯ ಪಡೆದು ಬಾರ್ ಶಾಪ್ ಪ್ರಾರಂಭಿಸುವುದೋ ಅಥವಾ ಬೇಡವೋ ಎನ್ನುವುದು ಈ ಗ್ರಾಮಸಭೆಯ ಉದ್ದೇಶವಾಗಿತ್ತು. ಹಾಗಾಗಿ ನಮಗೆ ಬಾರ್ ಬೇಕು ಎಂದು ಬಂದಿದ್ದ ಕೆಲವು ಮದ್ಯ ಪ್ರಿಯರು ನೇರವಾಗಿ ಪ್ರತಿಭಟನೆ ಪ್ರಾರಂಭ ಮಾಡಿಯೇ ಬಿಟ್ಟರು.
ಅದಲ್ಲದೆ ಎಣ್ಣೆ ಹಾಕಿಕೊಂಡೇ ಪ್ರತಿಭಟನೆ ಪ್ರಾರಂಭಿಸಿದ್ದು, ಈ ಪ್ರತಿಭಟನಾಕಾರರು ಬಾರ್ ಬೇಡ ಎಂದು ಕಾರುಬಾರು ಮಾಡುತಿದ್ದವರಿಗೆ ಒಂದೆರಡು ಏಟು ಕೊಟ್ಟೇ ಬಿಟ್ಟಿದ್ದಾರೆ. ಸದ್ಯಕ್ಕೆ ಈ ಬಾರ್ ಪ್ರಾರಂಭಕ್ಕೆ ಅವಕಾಶ ಕೊಡಬೇಕೋ ಅಥವಾ ನಿರಾಕರಿಸಬೇಕೋ ಎಂಬ ಇಕ್ಕಟ್ಟಿನಲ್ಲಿ ಗ್ರಾಮ ಪಂಚಾಯಿತಿ ಸಿಕ್ಕಿಹಾಕಿಕೊಂಡಿದೆ.