ಹೊಸಪೇಟೆ: ತಾಲೂಕು ಕರ್ನಾಟಕ ಸಾಹಿತ್ಯ ಪರಿಷತ್ತು ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ, ಸಮಸ್ಯೆಗಳಿಗೆ ಆದಷ್ಟು ಶೀಘ್ರವಾಗಿ ಪರಿಹಾರವನ್ನು ಮಾಡಲಾಗುತ್ತದೆ ಎಂದು ತಹಶೀಲ್ದಾರ ಹೆಚ್. ವಿಶ್ವನಾಥ ಅವರು ಭರವಸೆ ನೀಡಿದರು.
ತಾಲೂಕು ಕಚೇರಿಯ ಮುಂದೆ ಇಂದು ಕರ್ನಾಟಕ ಸಾಹಿತ್ಯ ಪರಿಷತ್ತು ಸಾಂಕೇತಿಕ ಹೋರಾಟವನ್ನು ಆಯೋಜನೆ ಮಾಡಿತ್ತು. ಸುಮಾರು ವರ್ಷಗಳಿಂದ ನಗರಾಭಿವೃದ್ಧಿ ಇಲಾಖೆಯು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಕಟ್ಟದ ನಿವೇಶನಕ್ಕೆ ಜಾಗವನ್ನು ಮಂಜೂರು ಮಾಡಿತ್ತು. ಆದರೆ, ನಗರಾಭಿವೃದ್ದಿ ಇಲಾಖೆಯು ಆ ಜಾಗದಲ್ಲಿ ಉದ್ಯಾವನ ನಿರ್ಮಾಣ ಮಾಡಿದೆ. ಆ ನಿವೇಶನವನ್ನು ತಾಲೂಕು ಕನ್ನಡ ಸಾಹಿತ್ಯ ಭವನಕ್ಕೆ ಬಿಟ್ಟುಕೊಡಬೇಕು. ಈ ಹಿಂದೆ ಈ ವಿಷಯವನ್ನು ಸಾಕಷ್ಟು ಬಾರಿ ನಗರಾಭಿವೃದ್ಧಿ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.ಅದಕ್ಕಾಗಿ ಇವತ್ತು ಸಾಂಕೇತಿಕ ಹೋರಾಟವನ್ನು ಮಾಡಲಾಗುತ್ತದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಯತ್ನಳ್ಳಿ ಮಲ್ಲಯ್ಯ ಅವರು ಮನವಿ ಪತ್ರವನ್ನು ತಹಶೀಲ್ದಾರ ಹೆಚ್. ವಿಶ್ವನಾಥ ಅವರಿಗೆ ನೀಡಿದರು.
ಈ ವೇಳೆ ತಹಶೀಲ್ದಾರ್ ಮಾತನಾಡಿ, ಕನ್ನಡ ಸಾಹಿತ್ಯ ಭವನ ಕಟ್ಟಡ ಮಂಜೂರಾತಿ ಹಾಗೂ ಕನ್ನಡದ ನಾಮ ಫಲಕಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಜಿಲ್ಲಾಧಿಕಾರಿಗಳಿಗೆ ಮತ್ತು ಸಂಬಂಧಿಸಿದ ಇಲಾಖೆಗಳಿಗೆ ಪತ್ರವನ್ನು ಬರೆಯುತ್ತೇನೆ. ಆದಷ್ಟು ಬೇಗನೆ ಕಸಾಪಕ್ಕೆ ಸಂಬಂಧಿಸಿದ ಎಲ್ಲ ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.