ಬಳ್ಳಾರಿ: ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ವೈದ್ಯಕೀಯ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಇಂದು ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿ ಅವರು ತೀವ್ರ ನಿಗಾ ಘಟಕಕ್ಕೆ ಚಾಲನೆ ನೀಡಿದರು.
ವಿಮ್ಸ್ ಅಧೀನದಲ್ಲಿ ಇರುವ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆಯಲ್ಲಿ ನವೀಕೃತ 10 ಹಾಸಿಗೆಗಳ ಉಸಿರಾಟದ ತೀವ್ರನಿಗಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಹಾಸಿಗೆಗಳನ್ನು ಸಾರ್ವಜನಿಕ ಮತ್ತು ರೋಗಿಗಳ ಸೇವೆಗಾಗಿ ವ್ಯವಸ್ಥೆ ಮಾಡಲಾಗಿದೆ. ಈ ಉಸಿರಾಟದ ತೀವ್ರನಿಗಾ ಘಟಕ 10 ಹಾಸಿಗೆಗಳಿಂದ ಕೂಡಿದ್ದು, ಕೊವೀಡ್-19 ಪಾಸಿಟಿವ್ ಬಂದ ರೋಗಿಗಳಿಗೆ, ಉಸಿರಾಟದಿಂದ ಬಳಲುತ್ತಿರುವವರಿಗೆ ಉತ್ತಮ ಚಿಕಿತ್ಸೆ ನೀಡಲು ಅನುಕೂಲವಾಗಲಿದೆ ಎಂದರು.
ಘಟಕಕ್ಕೆ ಅವಶ್ಯಕವಿರುವ 10 ವೆಂಟಿಲೆಟರ್‌ಗಳನ್ನು ಜಿಂದಾಲ್ ಸ್ಟೀಲ್ ಕಂಪನಿಯವರು ವಿಮ್ಸ್ ಗೆ ಕೊಡುಗೆಯಾಗಿ ನೀಡಿದ್ದಾರೆ. ಈ ವೇಳೆ ಅಪರ ಜಿಲ್ಲಾಧಿಕಾರಿ ಮಂಜುನಾಥ, ವಿಮ್ಸ್ ನಿರ್ದೇಶಕರಾದ ಡಾ.ಬಿ.ದೇವಾನಂದ, ವಿಮ್ಸ್ ವೈದ್ಯಕೀಯ ಅಧೀಕ್ಷಕರಾದ ಡಾ.ಮರಿರಾಜ್ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.