ಬಳ್ಳಾರಿ : ಇಡೀ ಸಮಾಜ ರಾಷ್ಟ್ರದ ಒಳಿತನ್ನು ಬಯಸುವಂತಾಗಬೇಕು. ಅದಕ್ಕಾಗಿ ಅನುಶಾಸನ ಸ್ವೀಕಾರವಾಗಬೇಕು ಮತ್ತು ಈ ಕಾರ್ಯ ನಿರಂತರವಾಗಿರಬೇಕು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದ್ದಾರೆ. ನಗರದ ಸೊಂತಲಿಂಗಣ್ಣ ಕಾಲೋನಿಯಲ್ಲಿರುವ ವಿಜಯಭಾರತಿ ನೂತನ ಕಟ್ಟಡ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಶುದ್ಧ ಸಾತ್ವಿಕ ಪ್ರೇಮವೇ ಸಮಾಜ ಸಂಘಟನೆಗೆ ಸ್ವಾಭಾವಿಕ ಆಧಾರವಾಗಿದೆ. ಪರಸ್ಪರ ಪ್ರೇಮ, ಸಹಬಾಳ್ವೆ ಪ್ರಾಚೀನ ಕಾಲದಿಂದಲೂ ಭಾರತೀಯರಲ್ಲಿ ಅಡಕವಾಗಿದೆ. ಭಾರತದ ಪ್ರಗತಿ ಕೇವಲ ಒಬ್ಬರ ಕೆಲಸವಲ್ಲ. ಪ್ರಗತಿಗೆ ಪ್ರತಿಯೊಬ್ಬರ ಕೊಡುಗೆಯೂ ಅವಶ್ಯ ಎಂದು ಅಭಿಪ್ರಾಯಪಟ್ಟರು.
ಸಮಾಜ ತನ್ನನ್ನು ತಾನು ದೇಶದ ಪ್ರಗತಿಯಲ್ಲಿ ತೊಡಗಿಸಿಕೊಂಡಾಗ ಅಭಿವೃದ್ಧಿ ಸಾಧ್ಯ. ಕಳೆದ 98 ವರ್ಷಗಳಿಂದ ಸಂಘ ಕಾರ್ಯ, ಶಾಖೆ ನಡೆದುಕೊಂಡು ಬಂದಿದೆ. ಇದು ಒಂದು ಅನುಶಾಸನ. ಇದರ ಪ್ರಮುಖ ಉದ್ದೇಶವೇ ಸಮಾಜದ ಸಂಘಟನೆ ಹಾಗೂ ಭಾರತವನ್ನು ಪರಮ ವೈಭವ ಸ್ಥಿತಿಗೆ ಕೊಂಡೊಯ್ಯುವುದು ಎಂದು ಹೇಳಿದರು.
ಯಾವುದೇ ಸತ್ಕಾರ್ಯಕ್ಕೆ ಸಾಧನಗಳು ಅವಶ್ಯ. ಅದೇ ರೀತಿ ಸಂಘ ಕಾರ್ಯಕ್ಕೆ ಕಾರ್ಯಾಲಯಗಳು ಸಾಧನವಾಗಿವೆ. ಇಲ್ಲಿ ಸ್ವಯಂಸೇವಕರು ಸಾತ್ವಿಕ ಪ್ರೇಮ, ಆತ್ಮೀಯತೆ, ಅನ್ಯೋನ್ಯತೆ, ಪ್ರಾಮಾಣಿಕತೆ ಹಾಗೂ ನಿಸ್ವಾರ್ಥತೆ ಗುಣಗಳಿಂದ ಎಲ್ಲರೊಂದಿಗೆ ವ್ಯವಹರಿಸುತ್ತಾರೆ. ಅನ್ಯ ಸಂಘಟನೆಗಳು ದೇಶ ಹಾಗೂ ಸಮಾಜದ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ಮಾಡುತ್ತವೆ. ಆದರೆ ರಾ. ಸ್ವ. ಸಂಘ ಹಾಗೂ ಸ್ವಯಂಸೇವಕರು ಸಮಸ್ಯೆ ಜೊತೆ ಉಪಾಯ ಹುಡುಕುತ್ತಾರೆ ಎಂದು ಹೇಳಿದರು.
ಸ್ವಯಂಸೇವಕರು ಮಾತಿಗಿಂತ ಕೃತಿ ಲೇಸು ಎಂಬ ಮಾತಿಗೆ ತಕ್ಕಂತೆ ಕೆಲಸ ಮಾಡುತ್ತಾರೆ. ಇದಕ್ಕೆ ಉತ್ತಮ ನಿದರ್ಶನವೆಂದರೆ, ಕೊರೋನಾ ಸಂದರ್ಭದಲ್ಲಿ ಎಲ್ಲರೂ ಪರಿಸ್ಥಿತಿ ಅವಲೋಕಿಸುವ ಹಂತದಲ್ಲಿದ್ದರೇ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಆದರೆ ಬೇರೆ ದೇಶಗಳಲ್ಲಿ ಈ ರೀತಿಯ ಕಾರ್ಯ ಕಾಣಲಿಲ್ಲ ಎಂದು ಮೋಹನ್ ಭಾಗವತ್ ತಿಳಿಸಿದರು.
ವಸುಧೈವ ಕುಟುಂಬಕಮ್ ಎಂದು ನಮ್ಮ ಸಂಸ್ಕೃತಿ ಹೇಳುತ್ತದೆ. ಎಲ್ಲರನ್ನೂ ನಾವು ಸ್ವೀಕರಿಸುತ್ತೇವೆ. ದೇಶ ಹಾಗೂ ಸಮಾಜದಲ್ಲಿ ಯಾವುದೇ ವಿಪತ್ತು, ತೊಂದರೆ ಇದ್ದಲ್ಲಿ ಸ್ವಯಂಸೇವಕರು ನಿಸ್ವಾರ್ಥ ಬುದ್ಧಿಯಿಂದ, ಶೀಲಯುಕ್ತ, ಭದ್ರ ವ್ಯವಹಾರದಿಂದ ಹಾಗೂ ತನು-ಮನ-ಧನಗಳಿಂದ ಕಾರ್ಯನಿರ್ವಹಿಸುತ್ತಾರೆ. ಇದು ಉಳಿದವರಿಗೆ ಅನುಕರಣೀಯವೂ ಹೌದು. ಇದುವೇ ಸಂಘದ ನೀತಿಯಾಗಿದೆ. ಸ್ವಯಂಸೇವಕನ ಈ ಎಲ್ಲ ಗುಣಗಳು ರಾಷ್ಟ್ರ ಕಾರ್ಯದ ಸಕ್ರಿಯತೆಯನ್ನು ಇಮ್ಮಡಿಗೊಳಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯ ಕಚೇರಿಯಲ್ಲಿ ಹಲವು ವರ್ಷಗಳಿಂದ ಆಗಸ್ಟ್ 15 ಮತ್ತು ಜನವರಿ 26ರಂದು ರಾಷ್ಟ್ರಧ್ವಜವನ್ನು ಹಾರಿಸುತ್ತಿದ್ದೇವೆ. ಅಲ್ಲದೆ ಧ್ವಜ ವಂದನೆಯನ್ನು ಮಾಡುತ್ತಿದ್ದೇವೆ. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಸಂಘ ಸ್ಥಾಪಕರಾದ ಹೆಡಗೇವಾರ್ ಅವರು ರಾಷ್ಟ್ರ ಧ್ವಜದೊಂದಿಗೆ ಪಥ ಸಂಚಲನವನ್ನು ನಡೆಸುವಂತೆಯೂ ಹೇಳಿದ್ದರು. ಈ ಸಂದರ್ಭದಲ್ಲಿ ಇನ್ನೂ ರಾಷ್ಟ್ರ ಧ್ವಜದ ಬಗ್ಗೆ ಸರಿಯಾದ ನಿರ್ಧಾರ ಕೈಗೊಳ್ಳಲಾಗಿರಲಿಲ್ಲ. ಅದಕ್ಕಾಗಿ ಅಂದು ನಾವು ಭಗವಾಧ್ವಜದೊಂದಿಗೆ ಸಂಚಲನ ನಡೆಸಿದ್ದೆವು.
ಬಳಿಕ ನೆಹರೂ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರ ಧ್ವಜ ಅಂತಿಮಗೊಳಿಸಿದ ನಂತರ ಮೊದಲ ಬಾರಿಗೆ ತಿರಂಗಾ ಧ್ವಜ ಹಾರಿಸುವಾಗ ಈ ಧ್ವಜವು 40 ಅಡಿ ಎತ್ತರದಲ್ಲಿ ಸಿಲುಕಿಕೊಂಡಿತ್ತು. ಈ ವೇಳೆ ಅಲ್ಲಿಯೇ ಇದ್ದ ಯುವಕನೋರ್ವ ಧ್ವಜ ಕಂಬದ ಮೇಲೇರಿ ಕಂಬದಲ್ಲಿ ಸಿಲುಕಿಕೊಂಡಿದ್ದ ಧ್ವಜವನ್ನು ಸರಿ ಮಾಡಿ ಕೆಳಗೆ ಇಳಿದುಬಂದ. ಅವನೇ ಹೆಸರೇ ಕಿಶನ್ ಸಿಂಗ್ ರಜಪೂತ್. ಅವನು ಆರ್ಎಸ್ಎಸ್ನ ಸ್ವಯಂಸೇವಕನಾಗಿದ್ದ ಎಂದು ಭಾಗವತ್ ಹೇಳಿದರು. ಬಳಿಕ ಅಧಿವೇಶನದಲ್ಲಿ ಯುವಕನನ್ನು ಸನ್ಮಾನಿಸಲು ನಿರ್ಧರಿಸಿದಾಗ, ಆ ಯುವಕ ಶಾಖೆಗೆ ಹೋಗುತ್ತಾನೆ. ಆದ್ದರಿಂದ ಆತನಿಗೆ ಸನ್ಮಾನ ಮಾಡಬಾರದು ಎಂದು ಹೇಳಿದರು. ಆದರೆ ಆ ಯುವಕ ನಾನು ಸನ್ಮಾನಕ್ಕೋಸ್ಕರ ಮಾಡಿಲ್ಲ. ನಮ್ಮ ದೇಶದ ಧ್ವಜ ಎಂದು ಈ ಕೆಲಸ ಮಾಡಿದೆ ಎಂದು ಹೇಳಿದ್ದ. ಬಳಿಕ ಈ ಯುವಕನ ಮನೆಗೆ ತೆರಳಿದ್ದ ಹೆಡಗೇವಾರ್ ಅವರು ಯುವಕನನ್ನು ಸನ್ಮಾನಿಸಿದ್ದರು ಎಂದರು.
ಇತ್ತೀಚೆಗೆ ಆರ್ಎಸ್ಎಸ್ನವರು ರಾಷ್ಟ್ರ ಧ್ವಜಕ್ಕೆ ಗೌರವ ನೀಡುವುದಿಲ್ಲ ಎಂದು ನಮ್ಮ ಕಚೇರಿ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಬಂದಿದ್ದರು. ಈ ವೇಳೆ ಅವರನ್ನು ಆದರದಿಂದ ಸ್ವಾಗತ ಮಾಡಿ ಧ್ವಜ ವಂದನೆ ಮಾಡುವಂತೆ ಹೇಳಲಾಯಿತು. ಅವರು ಪ್ರತಿಭಟಿಸಲು ಆಗಮಿಸಿದ್ದರು, ನಾವು ಅವರನ್ನು ಸ್ವಾಗತಿಸಿದೆವು ಎಂದು ಮೋಹನ್ ಭಾಗವತ್ ಹೇಳಿದರು.
ವಿಜಯಭಾರತಿ ಟ್ರಸ್ಟ್ ಸಮಾಜದ ಪ್ರತಿಷ್ಠಿತ ಸಂಸ್ಥೆಯಾಗಿ ಸದಾ ಸಾಮಾಜಿಕ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದರ ನೂತನ ಕಾರ್ಯಾಲಯ ಮುಂಬರುವ ದಿನಗಳಲ್ಲಿ ರಾಷ್ಟ್ರಹಿತ ಹಾಗೂ ಸಾಮಾಜಿಕ ಕಾರ್ಯಗಳಿಗೆ ಪೂರಕವಾಗಲಿದೆ. ಈ ನೂತನ ಕಟ್ಟಡಕ್ಕೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆ ತಿಳಿಸಿದರು.
ಸಭಾ ಕಾರ್ಯಕ್ರಮದ ಪೂರ್ವದಲ್ಲಿ ವಿಜಯಭಾರತಿ ನೂತನ ಕಟ್ಟಡದ ವಾಸ್ತು ಶಾಂತಿ, ಗೃಹ ಪ್ರವೇಶದ ಧಾರ್ಮಿಕ ವಿಧಿಗಳು ನಡೆದವು. ಕಾರ್ಯಕ್ರಮದಲ್ಲಿ ವಿಜಯಭಾರತಿ ಟ್ರಸ್ಟ್ ಅಧ್ಯಕ್ಷ ಸಾಂಕಲಚಂದ ಬಾಗ್ರೇಚಾ, ರಾ.ಸ್ವ. ಸಂಘದ ದಕ್ಷಿಣ ಮಧ್ಯ ಕ್ಷೇತ್ರ ಸಂಘಚಾಲಕ ವಿ. ನಾಗರಾಜ, ಕ್ಷೇತ್ರ ಪ್ರಚಾರಕ ಸುಧೀರ, ಪ್ರಾಂತ ಸಂಘಚಾಲಕ ಖಗೇಶನ್ ಪಟ್ಟಣಶೆಟ್ಟಿ, ಸಹಪ್ರಾಂತ ಸಂಘಚಾಲಕ ಅರವಿಂದರಾವ್ ದೇಶಪಾಂಡೆ, ಬಳ್ಳಾರಿ ವಿಭಾಗ ಸಂಘಚಾಲಕ ಬಸವರಾಜ ಡಂಬಳ, ಸಂಘದ ಪ್ರಾಂತೀಯ ಅಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.
ಇದನ್ನೂ ಓದಿ : ನನಗಿಂತ ಬುದ್ಧಿವಂತರು ಸಿಕ್ಕರೆ ಅವರನ್ನೇ ಬಿಜೆಪಿ ರಾಜ್ಯಾಧ್ಯಕ್ಷ ಮಾಡಿ: ವಿ. ಸೋಮಣ್ಣ