ಬಳ್ಳಾರಿ: ಜಿಲ್ಲಾ ಖನಿಜ ನಿಧಿಯಿಂದ (ಡಿಎಫ್ಎಫ್) ಗಣಿನಾಡಿನ ಸುಮಾರು ನೂರು ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಆರಂಭಿಸಲು ಜಿಲ್ಲಾಡಳಿತ ಸಜ್ಜಾಗಿದೆ.
ಜಿಲ್ಲಾ ಖನಿಜ ನಿಧಿಯಿಂದ ಅಂದಾಜು ಎರಡು ಕೋಟಿಗೂ ಅಧಿಕ ವೆಚ್ಚದಲ್ಲಿ ಈ ಸ್ಮಾರ್ಟ್ ಕ್ಲಾಸ್ ಅನ್ನು ಆರಂಭಿಸಲು ಖಾಸಗಿ ಕಂಪನಿಯ ಒಡೆತನದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಟೆಂಡರ್ ಪ್ರಕ್ರಿಯೆ ಕೂಡ ಪೂರ್ಣಗೊಳಿಸಿದೆ.
ಇನ್ಮುಂದೆ ಗಣಿ ಜಿಲ್ಲೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳೆಲ್ಲವೂ ಕೂಡ ಅತ್ಯಾಧುನಿಕ ತಂತ್ರಜ್ಞಾನವುಳ್ಳ ಅತ್ಯುತ್ತಮ ಸರ್ಕಾರಿ ಶಾಲೆಗಳಾಗಿ ಹೊರಹೊಮ್ಮಲಿವೆ. ಖಾಸಗಿ ಸಹಭಾಗಿತ್ವದಡಿ ಕಾರ್ಯನಿರ್ವಹಿಸುತ್ತಿರುವ ಶಾಲೆಗಳಲ್ಲಿ ಮಾತ್ರ ಈ ಸ್ಮಾರ್ಟ್ ಕ್ಲಾಸ್ ಅನ್ನು ನಡೆಸುವ ಪದ್ಧತಿ ಜಾರಿಯಲ್ಲಿತ್ತು. ಆದರೀಗ ಸರ್ಕಾರಿ ಶಾಲೆಗಳೂ ಕೂಡ ನಾವ್ ಯಾರಿಗೂ ಕಮ್ಮಿಯಿಲ್ಲ ಎನ್ನುತ್ತಿವೆ.
ಈ ಕುರಿತು ಈಟಿವಿ ಭಾರತದೊಂದಿಗೆ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಅವರು ಮಾತನಾಡಿ, ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆಯನ್ನ ನೀಗಿಸುವ ಸಲುವಾಗಿ ಈ ಸ್ಮಾರ್ಟ್ ಕ್ಲಾಸ್ ಅನ್ನು ಆರಂಭಿಸಲು ಚಿಂತನೆ ನಡೆಸಲಾಗಿದೆ. ಎರಡ್ಮೂರು ತಿಂಗಳ ಹಿಂದೆಯಷ್ಟೇ ಜಿಲ್ಲೆಯ ಸಂಡೂರು ತಾಲೂಕಿನಲ್ಲಿ ಸ್ಮಾರ್ಟ್ ಕ್ಲಾಸ್ ನಡೆಸುವ ಪೈಲಟ್ ಯೋಜನೆಯಾಗಿ ಶುರು ಮಾಡಲಾಗಿದೆ. ಆರೇಳು ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ನಡೆಯುತ್ತಿವೆ.
ಸಂಡೂರು ತಾಲೂಕಿನಾದ್ಯಂತ 30 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನ ಆಯ್ಕೆ ಮಾಡಲಾಗಿದ್ದು, ಅಂದಾಜು 42 ಲಕ್ಷ ರೂ. ಅನುದಾನ ಮೀಸಲಿರಿಸಿದೆ. ಅಲ್ಲದೇ, ಜಿಲ್ಲೆಯ ನಾನಾ ತಾಲೂಕಿನ ಸರ್ಕಾರಿ ಶಾಲೆಗಳಲ್ಲೂ ಕೂಡ ಸ್ಮಾರ್ಟ್ ಕ್ಲಾಸ್ ಆರಂಭಿಸಲಾಗುವುದು. ಹಂತ ಹಂತವಾಗಿ ಸುಮಾರು ನೂರು ಶಾಲೆಗಳಲ್ಲಿ ಈ ಸ್ಮಾರ್ಟ್ ಕ್ಲಾಸ್ ತರಗತಿಗಳನ್ನ ಶುರು ಮಾಡಲಾಗುವುದು ಎಂದು ತಿಳಿಸಿದರು. ದೊಡ್ಡದಾದ ಪರದೆ, ಪ್ರಾಜೆಕ್ಟರ್ ಹಾಗೂ ಆಯವ್ಯಯಾಧಾರಿತ ಸಿಡಿಗಳನ್ನು ಹಾಕಿ ಪ್ರಾಜೆಕ್ಟ್ರ ಮೂಲಕ ಹಾಕಿ ಪ್ಲೇ ಮಾಡಲಾಗುವುದು. ಆ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸಲಾಗುವುದು ಎಂದರು.