ಬಳ್ಳಾರಿ: ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾನಾ ಗ್ರಾಮಗಳಲ್ಲಿ ಜಲಾವೃತಗೊಂಡಿದ್ದ ನೆರೆ ಸಂತ್ರಸ್ತರಿಗೆ ಸೂರು ಕಲ್ಪಿಸುವ ಯೋಜನೆ ದಶಕದಿಂದಲೂ ಕುಂಟುತ್ತಾ ಸಾಗಿದೆ. ನಿವೇಶನವಿದ್ದರೂ ನೆರೆ ಸಂತ್ರಸ್ತರು ತೊಂದರೆ ಅನುಭವಿಸುತ್ತಿದ್ದಾರೆ.
2009ರಲ್ಲಿ ಉಂಟಾದ ಭೀಕರ ಪ್ರವಾಹದಿಂದ ತಾಲೂಕಿನ ಹಚ್ಚೊಳ್ಳಿ, ನಡಿವಿ ಹಾಗೂ ಕೊಂಚಿಗೇರಿ ಸೇರಿ ಹಲವು ಗ್ರಾಮಗಳ ನದಿಪಾತ್ರದ ವಲಸಿಗ ಕುಟುಂಬಗಳ ಬದುಕು ಇಂದಿಗೂ ತ್ರಿಶಂಕು ಸ್ಥಿತಿಯಲ್ಲಿದೆ. ಈ ಮೂಲಕ ನೆರೆ ಸಂತ್ರಸ್ತರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಬಿ ಎಸ್ ಯಡಿಯೂರಪ್ಪನವರೇ ಅಂದು ಕೂಡ ಸಿಎಂ ಆಗಿದ್ದರು. ಈಗವರೇ ಮತ್ತೆ ಸಂತ್ರಸ್ತರ ನೆರವಿಗೆ ಧಾವಿಸಬೇಕಾದ ಪರಿಸ್ಥಿತಿ ಎದುರಾಗಿದೆ.
ತಾಲೂಕಿನ ನಾನಾ ಗ್ರಾಮಗಳಲ್ಲಿ ಸ್ಲಂಬೋರ್ಡ್ ಹಾಗೂ ಖಾಸಗಿ ಕಂಪನಿಗಳ ಸಹಭಾಗಿತ್ವದಿಂದ ನಿರ್ಮಿಸಿರುವ ವಸತಿಗಳಲ್ಲಿ ಸೌಲಭ್ಯಗಳೇ ಮರೀಚಿಕೆಯಾಗಿವೆ. ಕೆಲವೆಡೆ ಭೂಮಿ ಇದ್ದರೂ ಅಧಿಕೃತವಾಗಿ ಸ್ಲಂಬೋರ್ಡ್ ವಶಕ್ಕೆ ಪಡೆದುಕೊಂಡಿಲ್ಲ. ದಶಕದಿಂದ ವೃಥಾ ಕೊರತೆ ಎದುರಿಸುತ್ತಿರುವ ಸಂತ್ರಸ್ತರಿಗೆ ಸ್ಲಂಬೋರ್ಡ್ ಮಾಡಿರುವ ಅವಾಂತರದಿಂದ ಕಾಗದ ಪತ್ರ ಹಸ್ತಾಂತರಿಸದೇ ಬಾಕಿ ಉಳಿಸಿಕೊಂಡಿದೆ.
ವರದಿ ನೀಡಲು ಸಮಿತಿ ಗಡುವು: ಮುಂದಿನ 20 ದಿನಗಳಲ್ಲೇ ಸಮಗ್ರ ವರದಿ ನೀಡಲು ಸಮಿತಿ ಜಿಲ್ಲಾಡಳಿತಕ್ಕೆ ಗಡುವು ನೀಡಿದೆ. ಕಚ್ಚಾಮನೆ ಹಾಗೂ ಕಿಟಕಿ ಸೇರಿ ಇನ್ನಿತರೆ ಪರಿಕರಗಳ ಡ್ಯಾಮೇಜ್ಗೆ ಸೂಕ್ತ ಕ್ರಿಯಾ ಯೋಜನೆ ತಯಾರಿಸಿ ಬೆಂಗಳೂರಿನಲ್ಲಿ ನಡೆಯಲಿರುವ ಸರ್ಕಾರದ ಅಧೀನ ಕಾರ್ಯದರ್ಶಿ ಸಮಕ್ಷದಲ್ಲಿ ಈ ವರದಿ ಒಪ್ಪಿಸುವಂತೆ ಸೂಚನೆ ನೀಡಿರುವುದಾಗಿ ಸಮಿತಿಯ ಅಧ್ಯಕ್ಷ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.