ಬಳ್ಳಾರಿ : ಒಂದೇ ಸಮುದಾಯದ ಎರಡು ಗುಂಪುಗಳ ನಡುವೆ ಗಲಾಟೆ ನಡೆದು ಆರು ಜನ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ತಾಲೂಕು ಖಾನಹೊಸಳ್ಳಿ ಹೋಬಳಿ ಎಸ್.ಇಮ್ಮಡಾಪುರ ಗ್ರಾಮದ ಗೊಲ್ಲರಟ್ಟಿಯಲ್ಲಿ ನಡೆದಿದೆ.
ಗೊಲ್ಲ ಜನಾಂಗದ ಒಬ್ಬ ಮಹಿಳೆಯ ಅನೈತಿಕ ಸಂಬಂಧಕ್ಕೆ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ. ಮಹಿಳೆಯ ಕಡೆಯವರಿಗೆ ಹಿಗ್ಗಾಮುಗ್ಗಾ ಹೊಡೆಯಲಾಗಿದೆ. ಗಾಯಾಳುಗಳಾದ ತಿಮ್ಮಣ್ಣ(45), ಚಿತ್ತಣ್ಣ(30), ಮಹೇಶ್(18ವರ್ಷ ) ತಿಪ್ಪೇಶಿ (40 ವರ್ಷ) ತಿಮ್ಮಣ್ಣ( 30 ವರ್ಷ ), ನಾಗರಾಜ ( 30ವರ್ಷ ) ಕೂಡ್ಲಿಗಿ ತಾಲೂಕಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಾನುವಾರ ಮಧ್ಯಾಹ್ನ ಈ ಗಲಾಟೆ ನಡೆದಿದೆ. ಪೊಲೀಸ್ ಠಾಣೆಗೆ ದೂರು ನೀಡಲು ಹೋದ್ರೆ ಅಲ್ಲಿನ ಅಧಿಕಾರಿಗಳು ನೀವು ಒಂದೇ ಸಮುದಾಯದವರು ರಾಜಿ ಮಾಡಿಕೊಳ್ಳಿ ಎಂದು ಹೇಳುತ್ತಾರೆ ಎನ್ನುವ ಮಾಹಿತಿ ಬಂದಿದೆ. ರೆಡ್ಡಿ, ರಂಗಪ್ಪ, ಚಿತ್ತಪ್ಪ, ರಂಗಸ್ವಾಮಿ, ರಂಗಣ್ಣ ಬಾಲರಾಜ ಹಾಗೂ ವೀರೇಶ್ ಬಡಿಗೆಗಳಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಈಟಿವಿ ಭಾರತದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಖಾನಾಹೊಸಳ್ಳಿ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಗಲಾಟೆ ಮಾಡಿದ ಜನರೇ ನಾವು ರಾಜಿ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ ಹಾಗಾಗಿ ಕೇಸ್ ಮಾಡಿಲ್ಲ ಎಂದಿದ್ದಾರೆ.