ಹೊಸಪೇಟೆ: ಚಿತ್ತವಾಡ್ಗಿ ವಿನೋಬಾ ಭಾವೆ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಲವು ಸಮಸ್ಯೆಗಳಿಂದ ನಲುಗಿ ಹೋಗಿದೆ. ಕಿಡಿಗೇಡಿಗಳ ಪುಂಡಾಟಕ್ಕೆ ಶಿಕ್ಷಕರು ಬೇಸತ್ತು ಹೋಗಿದ್ದಾರೆ.
1ರಿಂದ 8ನೇ ತರಗತಿ ಇದ್ದು, 650 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಚಿತ್ತವಾಡ್ಗಿ ಬಡ ಕುಟುಂಬಗಳ ಮಕ್ಕಳಿಗೆ ಈ ಶಾಲೆಯು ಆಧಾರಸ್ತಂಭವಾಗಿದೆ. ಶಾಲೆಗೆ ವ್ಯವಸ್ಥಿವಾದ ಕಾಂಪೌಂಡ್ ಇಲ್ಲ. ಹಾಗಾಗಿ ರಾತ್ರಿ ಸಮಯದಲ್ಲಿ ಶಾಲಾ ಆವರಣದಲ್ಲಿ ಕಿಡಿಗೇಡಿಗಳು ಮದ್ಯ ಸೇವಿಸಿ ಗಲೀಜು ಮಾಡುತ್ತಿದ್ದಾರೆ. ಬೆಳಗ್ಗೆ ಶಾಲೆಗೆ ಬರುವ ಶಿಕ್ಷಕರು ಇದನ್ನು ಸ್ವಚ್ಛ ಮಾಡುವುದೇ ಸವಾಲಾಗಿ ಪರಿಣಮಿಸಿದೆ.
ಶಾಲಾ ಕೊಠಡಿ ಮುಂಭಾಗ ಕಿಡಿಗೇಡಿಗಳು ಮಲ-ಮೂತ್ರ ವಿಸರ್ಜಿಸುತ್ತಿದ್ದಾರೆ. ಶಾಲಾ ಕೊಠಡಿಯ ಬಾಗಿಲು ಮುರಿದು ಪುಂಡತನ ಪ್ರದರ್ಶಿಸುತ್ತಿದ್ದಾರೆ. ಹಾಗಾಗಿ ಕೆಲ ಶಾಲಾ ಕೊಠಡಿಗಳ ಬಾಗಿಲಿಗೆ ಕಬ್ಬಿಣದ ಸಲಾಕೆ ಬಾಗಿಲನ್ನು ಅಳವಡಿಸಲಾಗಿದೆ. ಈ ಬಗ್ಗೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕಿ ರತ್ನಮ್ಮ ಮಾತನಾಡಿ, ಎರಡು ವರ್ಷಗಳ ಹಿಂದೆ ರಸ್ತೆ ಅಗಲೀಕರಣ ಸಮಯದಲ್ಲಿ ಶಾಲೆ ಕೌಂಪೌಂಡ್ ಬಿದ್ದು ಹೋಯಿತು. ಹಾಗಾಗಿ ಶಾಲೆಯು ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಮಸ್ಯೆ ಕುರಿತು ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಸಚಿವ ಆನಂದ್ ಸಿಂಗ್ ಕಾಂಪೌಂಡ್ ನಿರ್ಮಾಣಕ್ಕಾಗಿ 40 ಲಕ್ಷ ರೂಪಾಯಿ ಅನುದಾನ ಕಲ್ಪಿಸಿದ್ದು, ನಿರ್ಮಾಣ ಕಾರ್ಯ ಪ್ರಾರಂಭವಾಗಬೇಕಾಗಿದೆ ಎಂದರು.