ಬಳ್ಳಾರಿ: ರಸ್ತೆ ವಿಸ್ತರಣೆ ಸಲುವಾಗಿ ನಗರದ ತಾಳೂರು ರಸ್ತೆಯಲ್ಲಿರುವ ಸರ್ಕಾರಿ ಶಾಲೆಯ ಕಂಪೌಂಡ್ ಕೆಡವುತ್ತಿದ್ದ ವೇಳೆ ಗೋಡೆ ಕುಸಿದು ವ್ಯಕ್ತಿಯೋರ್ವನು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ನಗರದ ತಾಳೂರು ರಸ್ತೆಯ ಮಹಾನಂದಿಕೊಟ್ಟಂ ನಿವಾಸಿ ಗೋವಿಂದಪ್ಪ (50) ಮೃತ ವ್ಯಕ್ತಿಯೆಂದು ಗುರುತಿಸಲಾಗಿದೆ. ಸುಮಾರು 10 ಅಡಿ ಎತ್ತರದ ಶಾಲೆಯ ಕಂಪೌಂಡ್ ಒಂದು ತುದಿಯನ್ನು ಜೆಸಿಬಿಯಿಂದ ಕೆಡವುತ್ತಿದ್ದಾಗ, ಮತ್ತೊಂದು ಗೋಡೆಯ ತುತ್ತ ತುದಿಯಲ್ಲಿ ಗೋವಿಂದಪ್ಪ ಕುಳಿತಿದ್ದ. ಆ ಗೋಡೆ ಏಕಾಏಕಿ ಉರುಳಿಬಿದ್ದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅವನೊಂದಿಗೆ ಕುಳಿತಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮೃತ ವ್ಯಕ್ತಿಯ ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಹಾಗೂ ಸಂಬಂಧಿಕರ ರೋದನೆ ಮುಗಿಲು ಮುಟ್ಟಿತ್ತು. ಘಟನೆಯಿಂದ ತಾಳೂರು ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಜೆಸಿಬಿ ವಾಹನದ ಚಾಲಕ ಪರಾರಿಯಾಗಿದ್ದಾನೆ. ಘಟನಾ ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ.ಎನ್. ಲಾವಣ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.