ಬಳ್ಳಾರಿ: ಜಿಲ್ಲೆಯ ಕುರುಗೋಡು ತಾಲೂಕಿನ ಕಲ್ಲುಕಂಬ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಕುಸಿದಿದೆ. ಶಾಲೆ ಮುಗಿದು ಮಕ್ಕಳೆಲ್ಲಾ ಮನೆಗೆ ತೆರಳಿದ ಅಂದಾಜು ಅರ್ಧಗಂಟೆಯೊಳಗೆ ಈ ಘಟನೆ ನಡೆದಿದ್ದು, ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಒಂದು ವೇಳೆ ತರಗತಿಗಳು ನಡೆಯುತ್ತಿದ್ದ ಸಮಯದಲ್ಲಿ ಈ ಘಟನೆ ಜರುಗಿದ್ದರೆ, ಅಪಾರ ಪ್ರಮಾಣದ ಸಾವು ನೋವು ಆಗುವ ಸಾಧ್ಯತೆಯಿತ್ತು. ಘಟನೆಯ ನಂತರ ಗ್ರಾಮಸ್ಥರು, ವಿದ್ಯಾರ್ಥಿಗಳು ಮತ್ತು ಪೋಷಕರು ಶಿಕ್ಷಣ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಂಬತ್ತು ದಶಕಗಳಷ್ಟು ಹಳೆಯ ಕಟ್ಟಡದಲ್ಲಿಯೇ ಮಕ್ಕಳ ಮತ್ತು ಶಿಕ್ಷಕರ ಪ್ರಾಣವನ್ನು ಪಣಕ್ಕಿಟ್ಟು ಶಾಲೆ ನಡೆಸುವಂತಹ ಪರಿಸ್ಥಿತಿಗೆ ಕಾರಣವಾದ ಸರ್ಕಾರದ ಘಾತಕ ನಿರ್ಲಕ್ಷ್ಯತನವನ್ನು ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘ ಖಂಡಿಸಿದೆ.
ಶಿಥಿಲಗೊಂಡಿದ್ದ ಕಟ್ಟಡದ ಸಮಸ್ಯೆಗೆ ಪರಿಹಾರ ನೀಡುವಂತೆ ಹಲವು ಬಾರಿ ಬಿಇಓ ಕಚೇರಿಗೆ, ಶಾಸಕರಿಗೆ ಮನವಿ ಬರೆದರೂ ಪ್ರಯೋಜನವಾಗಿರಲಿಲ್ಲ. ಅಧಿಕಾರಿಗಳ ಭರವಸೆಗಳು ರಾಜಕಾರಣಿಗಳ ಭರವಸೆಗಳಂತಾದವು. ಎಂಬತ್ತು ದಶಕಗಳ ಹಳೆಯ ಕಟ್ಟಡ ಕುಸಿದಂತೆ ಈ ವ್ಯವಸ್ಥೆಯ ಮೇಲೆ ಜನಗಳಿಗಿದ್ದ ನಂಬಿಕೆಯೂ ಕುಸಿದಿದೆ. ಶಾಲೆಗೆ ಹೊಸ ಕಟ್ಟಡ ಆಗುವ ತನಕ ಹೋರಾಟ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ ಮತ್ತು ಈ ಹೋರಾಟವನ್ನು ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರು ಸೇರಿ ಕಟ್ಟಬೇಕೆಂದು ಸಂಘಟನೆಯ ಮುಖಂಡ ಈರಣ್ಣ ಹೇಳಿದ್ದಾರೆ.
ಸರ್ಕಾರದ ಈ ನಿರ್ಲಕ್ಷ್ಯವನ್ನು ಎಐಡಿಎಸ್‍ಓ ಸಂಘಟನೆ ಖಂಡಿಸಿದೆ. ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮಾಡಲು ಸರ್ಕಾರ ತಕ್ಷಣ ಕೆಲಸ ಆರಂಭಿಸಬೇಕು. ಕಟ್ಟಡ ನಿರ್ಮಾಣ ಆಗುವವರೆಗೂ ಮಕ್ಕಳಿಗೆ ಪಾಠಗಳನ್ನು ನಡೆಸಲು ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಈರಣ್ಣ ಆಗ್ರಹಿಸಿದ್ದಾರೆ.
ಓದಿ: ಶಾಲಾ ಮಕ್ಕಳಿಗೆ ನಾಟಿ ಕಲಿಕೆ: ಖುಷಿಯಿಂದಲೇ ಕೃಷಿಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು..