ಬಳ್ಳಾರಿ: ಹೆಲ್ಮೆಟ್ ಧರಿಸದೇ ಅಪಘಾತದಲ್ಲಿ ಬೈಕ್ ಸವಾರರ ತಲೆಗೆ ಪೆಟ್ಟಾಗಿ ಸಾವನ್ನಪ್ಪಿರುವ ಪ್ರಕರಣಗಳೇ ಹೆಚ್ಚಿವೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಗಣಿನಗರಿ ಬಳ್ಳಾರಿ ಉದ್ಯಮಿಯೊಬ್ಬರು ಈ ಹೆಲ್ಮೆಟ್‌ಗಳನ್ನು ಉಚಿತವಾಗಿ ನೀಡಿ ಬೈಕ್ ಸವಾರರ ಸಂಜೀವಿನಿಯಾಗಿದ್ದಾರೆ.
ರಾಯಲ್ ಎನ್‌ಫೀಲ್ಡ್ ಶೋ ರೂಂನ ಮಾಲೀಕರಾದ ಮುಂಡ್ಲೂರು ಪ್ರಭಂಜನಕುಮಾರ, ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್‌ನ ಸ್ಥಾಪಿಸಿ, ಅದರಡಿ ಬಳ್ಳಾರಿಯ ಬೈಕ್ ಸವಾರರಿಗೆ ಉಚಿತ ಹೆಲ್ಮೆಟ್‌ನ ಸ್ವತಃ ವಿತರಿಸುವ ಮುಖೇನ ಸಾರ್ವಜನಿಕರ ವಿಶೇಷ ಗಮನ ಸೆಳೆದಿದ್ದಾರೆ. ದಸರಾ ಹಬ್ಬದ ನಿಮಿತ್ತ ಆಯುಧ ಪೂಜೆಯ ದಿನದಂದೇ ಬಳ್ಳಾರಿಯ ಡಾ.ರಾಜಕುಮಾರ್ ರಸ್ತೆ, ಹೊಸ ಬಸ್ ನಿಲ್ದಾಣ ಸೇರಿ ಇತರೆಡೆ ಸ್ವತಃ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಐಎಸ್‌ಐ ಮಾರ್ಕ್ವುಳ್ಳ ಹೆಲ್ಮೆಟ್ ಬಾಕ್ಸ್‌ನ ಕೈಯಲ್ಲಿ ಹಿಡಿದು ಬೈಕ್ ಸವಾರರನ್ನು ನಿಲ್ಲಿಸಿ, ಹೆಲ್ಮೆಟ್‌ನ ಸವಾರರ ತಲೆಗೆ ಹಾಕಿದ್ದಾರೆ. ಅಲ್ಲದೇ, ಪ್ರತಿದಿನ ಕಡ್ಡಾಯವಾಗಿ ಈ ಹೆಲ್ಮೆಟ್ ಧರಿಸುವಂತೆ ಸವಾರರಿಗೆ ಸಲಹೆ ನೀಡಿದ್ದಾರೆ.
ಪ್ರೇರಣೆಯಾಗಿದ್ದು ಹೇಗೆ: ಪ್ರಭಂಜನಕುಮಾರ ಅವರ ಆತ್ಮೀಯರು ಬೆಳಗಾವಿಯ ಬೈಕ್ ಅಪಘಾತದಲ್ಲಿ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ಸಾವನ್ನಪ್ಪಿದ್ದರಂತೆ. ಆಗ ಹೆಲ್ಮೆಟ್ ಧರಿಸಿದ್ದರೆ ಜೀವಕ್ಕೆ ಯಾವುದೇ ಕುತ್ತು ಬರುತ್ತಿರಲಿಲ್ಲ ಎಂದು ಸ್ನೇಹಿತರು ಹೇಳಿದ್ದರು. ಹಾಗಾಗಿ ಈ ನಿರ್ಧಾರಕ್ಕೆ ಬಂದು ಪ್ರತಿಯೊಬ್ಬರ ಜೀವರಕ್ಷಣೆ ನಮ್ಮೆಲ್ಲರದ್ದಾಗ ಬೇಕಿದೆ ಎಂದು ಈ ಕಾರ್ಯ ಹಮ್ಮಿಕೊಂಡಿದ್ದಾರೆ.