ಹೊಸಪೇಟೆ(ವಿಜಯನಗರ): ಏಷ್ಯಾದ ಮೊದಲ ಕರಡಿಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ದರೋಜಿ ಕರಡಿಧಾಮದಲ್ಲಿ ಇದೀಗ ಸಫಾರಿಯೂ ಆರಂಭವಾಗಿದೆ. ಈ ಮೂಲಕ ಪ್ರವಾಸಿಗರಿಗೆ ಹತ್ತಿರದಿಂದ ಕರಡಿಗಳನ್ನು ನೋಡುವ ಅವಕಾಶ ಬಂದಿದೆ. ಇದು ಏಷ್ಯಾದ ಮೊದಲ ಕರಡಿ ಸಫಾರಿಯಾಗಿದೆ.
ಸಫಾರಿ ವಿವರ: ಬೆಳಿಗ್ಗೆ 6.30 ರಿಂದ 8.30ರವರೆಗೆ, ಮಧ್ಯಾಹ್ನ 2.30 ರಿಂದ ಸಂಜೆ 4.30 ರವರೆಗೆ ಸಫಾರಿ ಮಾಡಬಹುದು. ಆರು ವರ್ಷದ ಮಕ್ಕಳಿಗೆ ಹಣ ಪಾವತಿಸಬೇಕಿಲ್ಲ. 6 ರಿಂದ 12 ವರ್ಷ ಮೇಲಿನವರಿಗೆ 200 ರೂ., 12 ವರ್ಷ ಮೇಲಿನವರಿಗೆ ತಲಾ 400 ರೂ.ಶುಲ್ಕ ನಿಗದಿ ಮಾಡಲಾಗಿದೆ. ಸಫಾರಿಗೆ ನಾಲ್ಕು ಜೀಪುಗಳಿದ್ದು, ಹೆಚ್ಚಿನ ಜನರು ಬಂದರೇ ಜಂಗಲ್ ಲಾಡ್ಜ್ ವಾಹನಗಳನ್ನು ಬಳಕೆ ಮಾಡಲಾಗುತ್ತದೆ.
ಇನ್ನು ಸುಮಾರು 82 ಚದರ ಕಿಲೋಮೀಟರ್ ವ್ಯಾಪ್ತಿಯಲ್ಲಿ ದರೋಜಿ ಕರಡಿಧಾಮ ಇದೆ. ಈ ಧಾಮದಲ್ಲಿ ಕೋಡಗ, ಕೆಂಪು ಕೋತಿ, ಕರಡಿ ಹಾಗೂ ಚಿರತೆಗಳು ವಾಸಿಸುತ್ತವೆ. ಹಾಗಾಗಿ ಸರ್ಕಾರ 1994 ಅಕ್ಟೋಬರ್ 17 ಬಿಳಿಕಲ್ಲು ಕಾಯ್ದಿಟ್ಟ ಅರಣ್ಯ ಪ್ರದೇಶವನ್ನು ದರೋಜಿ ಕರಡಿ ಧಾಮವೆಂದು ಘೋಷಣೆ ಮಾಡಿತು. ಇಲ್ಲಿ ಸುಮಾರು 120 ಕರಡಿಗಳನ್ನು ಕಾಣಬಹುದಾಗಿದ್ದು, 28 ಕಿ.ಮೀ ಸಫಾರಿಯಲ್ಲಿ ಕರಡಿಗಳು ಸೇರಿದಂತೆ ಇನ್ನಿತರ ಜೀವಿಗಳನ್ನು ಸಹ ನೋಡಬಹುದು.